ಮೈಸೂರು: ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನೋತ್ಸವದ ಪ್ರಯುಕ್ತ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಖ್ಯಾತ ಸಾಹಿತಿ ಡಾ.ಕೆ.ಲೀಲಾಪ್ರಸಾದ್ ಮತ್ತು ನಾಡಿನ ಸುಪ್ರಸಿದ್ದ ಕವಿ ಡಾ.ಜಯಪ್ಪ ಹೊನ್ನಾಳಿ ಅವರಿಗೆ ವಿಶ್ವ ಮಾನವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹೂಟಗಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್ ಮತ್ತು ಶಾಲೆಯ ಮುಖ್ಯ ಶಿಕ್ಷಕರಾದ ಸಂಗೀತ ಹಾಗೂ ಇತರೆ ಗಣ್ಯರು ಲೀಲಾ ಪ್ರಸಾದ್ ಮತ್ತು ಜಯಪ್ಪ ಹೊನ್ನಾಳಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು.
ಈ ವೇಳೆ ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರಾಜಶೇಖರ್ ಮಾತನಾಡಿ, ರಾಷ್ಟ್ರಕಂಡ ಅಪ್ರತಿಮ ಕವಿಗಳಾದ ಕುವೆಂಪು ಅವರ ಜನ್ಮದಿನೋತ್ಸವದ ಅಂಗವಾಗಿ ನಮ್ಮ ವೇದಿಕೆಯಿಂದ ಈ ವರ್ಷ ವಿಶ್ವಮಾನವ ಪ್ರಶಸ್ತಿ ನೀಡುವ ಬಗ್ಗೆ ಚಿಂತನೆ ಮಾಡಿ, ಅದಕ್ಕಾಗಿ ಪ್ರಶಸ್ತಿಯ ಘನತೆಗೆ ತಕ್ಕ ಸಾಧಕರನ್ನು ಆಯ್ಕೆ ಮಾಡುವಾಗ ನಮ್ಮವರೇ ಆದ ಹೆಸರಾಂತ ಕವಿ, ಸಾಹಿತಿ, ವಾಗ್ಮಿ ಡಾ.ಜಯಪ್ಪ ಹೊನ್ನಾಳಿ ಮತ್ತು ಡಾ.ಲೀಲಾ ಪ್ರಸಾದ್ ಅವರನ್ನು ಅಂತಿಮವಾಗಿ ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು.
ಮಂತ್ರಮಾಂಗಲ್ಯದ ಮೂಲಕ ಆಡಂಬರದ ವಿವಾಹಗಳಿಗೆ ಕಡಿವಾಣ ಹಾಕಿದ ಕುವೆಂಪು ಅವರು ನಿಜವಾದ ಸಮಾಜ ಸುಧಾರಕರಾಗಿದ್ದಾರೆ ಎಂದು ಬಣ್ಣಿಸಿದರು.
ಕುವೆಂಪು ಅವರ ಸಾಹಿತ್ಯ, ಲೇಖನ, ಕೃತಿಗಳು ವಿಶ್ವಮಾನವರಾಗಲು ಪ್ರೇರಣೆ ನೀಡುತ್ತವೆ. ಈ ನಿಟ್ಟಿನಲ್ಲಿ ಮಕ್ಕಳು ಈಗಿನಿಂದಲೇ ಕುವೆಂಪು ಅವರ ಸಾಹಿತ್ಯವನ್ನು ಓದುವ ಮೂಲಕ ವಿಶ್ವಮಾನವರಾಗಿ ಬೆಳೆಯಬೇಕು ಎಂದು ರಾಜಶೇಖರ್ ಸಲಹೆ ನೀಡಿದರು.
ಪ್ರಶಸ್ತಿ ಪುರಸ್ಕೃತರಾದ ಡಾ.ಜಯಪ್ಪ ಹೊನ್ನಾಳಿ ಅವರು ಮಾತನಾಡಿ, ರಸಋಷಿ, ಮಹಾ ದಾರ್ಶನಿಕರು ಮತ್ತು ಸ್ವತಃ ವಿಶ್ವಮಾನವರಾಗಿ ಬದುಕಿದ ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ವಿಶ್ವ ಮಾನವ ಪ್ರಶಸ್ತಿ ನೀಡುವ ಮೂಲಕ ಕನ್ನಡಾಂಬೆ ರಕ್ಷಣಾ ವೇದಿಕೆ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ತಿಳಿಸಿದರು.
ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಭಾರತದ ಯಾವ ಭಾಷೆಗೂ ಸಿಗದ ಗೌರವವನ್ನು ಕನ್ನಡ ಭಾಷೆಗೆ ದೊರಕಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತದ ಯಾವುದೇ ಭಾಷೆಯ ಸಾಹಿತಿಗೆ ಸಲ್ಲಲಾರದಷ್ಟು ಪ್ರಶಸ್ತಿಗಳು ಲಭಿಸಿವೆ. ತಮ್ಮ ಸಾಹಿತ್ಯದ ಮೂಲಕ ಕುವೆಂಪು ಅವರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಇಂತಹ ಮಹಾನ್ ಸಮಾಜ ಸುಧಾರಕರ ಹೆಸರಿನಲ್ಲಿ
ನಮಗೆ ವಿಶ್ವಮಾನವ ಪ್ರಶಸ್ತಿ ನೀಡಲಾಗಿದ್ದು, ಸಮಾಜ ನಮ್ಮನ್ನು ನಿಜವಾಗಿ ಗುರುತಿಸಿದೆ. ಸಮಾಜ ನಮ್ಮ ಮೇಲಿಟ್ಟಿರುವ ನಿರೀಕ್ಷೆಯನ್ನು ನಾವು ಹುಸಿಗೊಳಿಸುವುದಿಲ್ಲ ಎಂಬ ವಾಗ್ದಾನವನ್ನು ಮಾಡಿ ಪ್ರಶಸ್ತಿ ಸ್ವೀಕರಿಸಿದ್ದೇವೆ ಎಂದು ಡಾ.ಜಯಪ್ಪ ಹೊನ್ನಾಳಿ ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಶಿವಕುಮಾರ್, ಹೂಟಗಳ್ಳಿ ಗ್ರಾಪಂ ಸದಸ್ಯ ನಾಗೇಶ್, ಲೂಯಿಸ್, ಹುಣಸೂರು ಪರಮೇಶ, ವತ್ಸಲ, ಲೋಕೇಶ, ವಿಷ್ಣು, ಮಂಜುಳ, ನೇಹ, ರಶ್ಮಿಸಿಂಗ್, ತಾರ, ಭಾಗ್ಯ, ಜಯಲಕ್ಷ್ಮಿ ಮುಂತಾದವರು ಹಾಜರಿದ್ದರು.
