ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ರಾಜಿನಾಮೆ ನೀಡಿದ್ದು, ಅದನ್ನು ಅಂಗೀಕರಿಸಲಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬದಲಿ ವ್ಯವಸ್ಥೆ ಆಗುವವರೆಗೂ ಅವರನ್ನೇ ಸಭಾಪತಿ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ ಎಂದು ಡಿ ಕೆ ಶಿ ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ,ಪ್ರಸಕ್ತ ರಾಜಕೀಯ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಬಸವರಾಜ ಹೊರಟ್ಟಿ ಅವರು ರಾಜೀನಾಮೆ ನೀಡಿದ್ದಾರೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.
ಹೊರಟ್ಟಿ ಅವರು ದೇಶದ ವಿಧಾನ ಪರಿಷತ್ ಇತಿಹಾಸದಲ್ಲೇ ಅತ್ಯಂತ ಹಿರಿಯ ನಾಯಕರು. ಅವರು ತಮ್ಮ ಹೃದಯ ವೈಶಾಲ್ಯತೆ ತೋರಿದ್ದಾರೆ. ಅದು ಮೆಚ್ಚುವಂತದ್ದು,ಆಗಸ್ಟ್ 13 ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು,14 ರಂದು ನೂತನ ಉಪಸಭಾಪತಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ನಂತರ ಉಪಸಭಾಪತಿಗಳ ಮೂಲಕ ಸಭಾಪತಿಗಳ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಬಸವರಾಜ ಹೊರಟ್ಟಿ ಅವರೊಂದಿಗೆ ವಿಧಾನಸೌಧದಲ್ಲಿ ಚರ್ಚೆ ನಡೆಸಿದ್ದ ಶಿವಕುಮಾರ್ ಅವರು, “ವಿಧಾನ ಪರಿಷತ್ತಿನ ಅಧ್ಯಕ್ಷ, ಉಪಾಧ್ಯಕ್ಷರನ್ನ ಆಯ್ಕೆ ಮಾಡಿ ನಂತರ ನಮ್ಮ ಸದಸ್ಯರೆಲ್ಲರಿಗೂ ಕೃತಜ್ಞತೆ ಸಲ್ಲಿಸುವ ಆಸೆಯನ್ನು ಬಸವರಾಜ ಹೊರಟ್ಟಿಯವರು ಇಟ್ಟುಕೊಂಡಿದ್ದಾರೆ. ಅವರ ಭಾವನೆಗಳನ್ನು ನಾವು ಒಪ್ಪಿಕೊಂಡಿದ್ದೇವೆ, ಗೌರವಿಸುತ್ತೇವೆ ಎಂದು ಹೇಳಿದರು.
ಹೊರಟ್ಟಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವಿಚಾರ ಇತ್ತಲ್ಲ ಎಂಬ ಪ್ರಶ್ನೆಗೆ,ನಾವುಗಳೇ ಒಂದು ಒಪ್ಪಂದಕ್ಕೆ ಬಂದ ಮೇಲೆ ಮುಂದೇನಿದೆ ಅವಿಶ್ವಾಸ ನಿರ್ಣಯ ಮಂಡನೆ ಅಪ್ರಸ್ತುತ. ಈಗ ಅವರೇ ರಾಜೀನಾಮೆ ನೀಡಿದ್ದಾರೆ. ಈಗ ರಾಜೀನಾಮೆ ಅಂಗೀಕರಿಸಿದರೂ ಅವರನ್ನೇ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕಿದೆ ಎಂದು ಸಿಎಂ ಉತ್ತರಿಸಿದರು.
ಬಸವರಾಜ ಹೊರಟ್ಟಿ ಅವರು ಶಿಸ್ತಿನ ಮನುಷ್ಯ. ಅವರು ಸಭಾಪತಿ ಸ್ಥಾನಕ್ಕೆ ನೀಡಿದಷ್ಟು ಗೌರವವವನ್ನು ಯಾರೂ ನೀಡಿಲ್ಲ. ಎಲ್ಲಾ ಸಂದರ್ಭದಲ್ಲೂ ಸರ್ಕಾರದ ಗೌರವ ಕಾಪಾಡಿಕೊಂಡು ಬಂದಿದ್ದಾರೆ. ನಮಗೆಲ್ಲರಿಗೂ ಅವರ ಬಗ್ಗೆ ಹೆಮ್ಮೆಯಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಇದುವರೆಗೂ ಸಭಾಪತಿಗಳ ಬದಲಾವಣೆಯಾಗಿರಲಿಲ್ಲ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರಲ್ಲ ಎಂದು ಕೇಳಿದಕ್ಕೆ ಅವರು ಬೇರೆ ರಾಜ್ಯಗಳಲ್ಲಿ ಏನೆಲ್ಲಾ ಮಾಡಿದ್ದಾರೆ ಪಟ್ಟಿ ನೀಡಲೇ, ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ಇದು ನಮ್ಮ ಹಾಗೂ ಹೊರಟ್ಟಿ ಅವರ ನಡುವಣ ವಿಚಾರ. ಶೆಟ್ಟರ್ ಅವರು ಇದ್ದಾಗ, ಹೊರಟ್ಟಿ ಅವರನ್ನು ಸಭಾಪತಿ ಮಾಡಿದಾಗ ನಡೆದ ಘಟನೆ ಏನು, ಮರೆತು ಹೋಯಿತೇ ಮಾಧ್ಯಮಗಳಲ್ಲಿ ಅವುಗಳ ದೃಶ್ಯಾವಳಿ ಇರಬೇಕಲ್ಲವೇ, ಮರುಪ್ರಸಾರ ಮಾಡಿ ಎಂದು ಠಕ್ಕರ್ ನೀಡಿದರು ಡಿ ಕೆ ಶಿ.
ನಮ್ಮಲ್ಲಿ ಯಾರಿಗೂ ಅಸಮಾಧಾನವಿಲ್ಲ. ಕೆಲವು ಹಿರಿಯ ನಾಯಕರಿರುತ್ತಾರೆ. ಅವರಿಗೆ ಜವಾಬ್ದಾರಿ ನೀಡಬೇಕಾಗುತ್ತದೆ. ನಾವು ಎಲ್ಲವನ್ನು ಬಗೆಹರಿಸುತ್ತೇವೆ ಎಂದು ಡಿ.ಕೆ.ಶಿವ ಕಾಮ ತಿಳಿಸಿದರು.
ಖಾತೆ ಹಂಚಿಕೆ ವಿಳಂಬವಾಗುತ್ತಿದೆ ಎಂದು ಕೇಳಿದ ಪ್ರಶ್ಬೆಗೆ,ಯಡಿಯೂರಪ್ಪ ಅವರು ಏಕಾಂಗಿಯಾಗಿ ಎಷ್ಟು ದಿನ ಸರ್ಕಾರ ನಡೆಸಿದರು ದೆಹಲಿಯಲ್ಲಿ ಎಷ್ಟು ದಿನ ಸರ್ಕಾರ ನಡೆಯಿತು ಎಂದು ಸಿಎಂ ಮರು ಪ್ರಶ್ನಿಸಿದರು.
