ಮೆಕ್ಸಿಕೊ: ಮೆಕ್ಸಿಕೋದ ಸಿನಾಲೋವಾ ರಾಜ್ಯದ ರಾಜಧಾನಿ ಕುಲಿಯಾಕನ್ನಲ್ಲಿ ಟಿಕ್ಟಾಕ್ ಪ್ರಭಾವಿ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದ್ದು, ಈ ಘಟನೆ ತೀವ್ರ ಸಂಚಲನ ಮೂಡಿಸಿದೆ.
ಕೊಲೆಯಾದ ವ್ಯಕ್ತಿಯನ್ನು ಸೀಸರ್ ಗ್ಯಾಸ್ಟೆಲಮ್ (César Gastélum) ಎಂದು ಗುರುತಿಸಲಾಗಿದ್ದು, ಅವರಿಗೆ ಟಿಕ್ಟಾಕ್ನಲ್ಲಿ 6 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದರು.
ಸೀಸರ್ ಅವರು ಫಾಸ್ಟ್ಫುಡ್ ರೆಸ್ಟೋರೆಂಟ್ (KFC) ಒಂದರ ಪಾರ್ಕಿಂಗ್ ಪ್ರದೇಶದಲ್ಲಿ ತನ್ನ ಸ್ನೇಹಿತರೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಲೈವ್ ವಿಡಿಯೋ ಮಾಡುತ್ತಿದ್ದಾಗ ಈ ಭೀಕರ ಘಟನೆ ನಡೆದಿದೆ.
ಹೆಲ್ಮೆಟ್ ಧರಿಸಿದ್ದ ಇಬ್ಬರು ದುಷ್ಕರ್ಮಿಗಳು ಮೋಟಾರ್ ಬೈಕ್ನಲ್ಲಿ ಬಂದು, ಸೀಸರ್ ಅವರ ಮೇಲೆ ಹತ್ತಿರದಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಈ ಇಡೀ ದೃಶ್ಯ ಲೈವ್ ವಿಡಿಯೋದಲ್ಲಿ ಸೆರೆಯಾಗಿದೆ.
ಮೆಕ್ಸಿಕೋದ ಅತ್ಯಂತ ಸಕ್ರಿಯ ಮತ್ತು ಹಿಂಸಾತ್ಮಕ ಡ್ರಗ್ ಮಾಫಿಯಾ ಗುಂಪಾದ ‘ಸಿನಾಲೋವಾ ಕಾರ್ಟೆಲ್’ನ ಆಂತರಿಕ ಗ್ಯಾಂಗ್ ವಾರ್ಗೆ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸೀಸರ್ ತಮ್ಮ ವಿಡಿಯೋಗಳಲ್ಲಿ ಕೆಲವು ಅಪರಾಧಿ ಗುಂಪುಗಳನ್ನು ಉಲ್ಲೇಖಿಸುತ್ತಿದ್ದರು ಎನ್ನಲಾಗಿದೆ.
ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್ಬಾಮ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಅಪರಾಧಿಗಳನ್ನು ತಕ್ಷಣವೇ ಬಂಧಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಮೆಕ್ಸಿಕೋದಲ್ಲಿ ಕಳೆದ 15 ತಿಂಗಳುಗಳಲ್ಲಿ ಲೈವ್ ಸ್ಟ್ರೀಮಿಂಗ್ ವೇಳೆ ಇನ್ಫ್ಲುಯೆನ್ಸರ್ ಒಬ್ಬರು ಹತ್ಯೆಯಾಗುತ್ತಿರುವುದು ಇದು ಎರಡನೇ ಘಟನೆಯಾಗಿದೆ.
ಇದಕ್ಕೂ ಮುನ್ನ 2025 ರಲ್ಲಿ ವಲೇರಿಯಾ ಮಾರ್ಕ್ವೆಜ್ ಎಂಬ ಯುವತಿಯನ್ನು ಬ್ಯೂಟಿ ಸಲೂನ್ನಲ್ಲಿ ಕೊಲ್ಲಲಾಗಿತ್ತು.
