ಹನೂರು: ಹನೂರು ಪಟ್ಟಣದ ಹೊರವಲಯದ ಹುಲಸುಗುಡ್ಡೆ ಬೋರೆ ಬಳಿ 7.50 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೂತನ ಬಸ್ ಘಟಕಕ್ಕೆ ನೂತನ ಸಚಿವ ಪುಟ್ಟರಂಗಶೆಟ್ಟಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಸುಮಾರು 4.20 ಎಕರೆ ಜಾಗದಲ್ಲಿ ನಿರ್ಮಿಸಲು ಸರ್ಕಾರದಿಂದ ಮಂಜೂರಾತಿ ದೊರಕಿದ್ದು,ಇಂದು ಸಚಿವರು ಹನೂರು ಶಾಸಕ ಎಂ.ಆರ್ ಮಂಜುನಾಥ್ ಜತೆಗೂಡಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬರ ಕಾಣಿಸಿಕೊಂಡಿದೆ, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಸ್ಥಳೀಯ ಶಾಸಕರಾದ ಎಂ ಆರ್ ಮಂಜುನಾಥ್, ಮಾಜಿ ಶಾಸಕ ಆರ್ ನರೇಂದ್ರ, ಜಿಲ್ಲಾಧಿಕಾರಿಗಳಾದ ಶ್ರೀ ರೂಪ, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನರೋತ್ ಅವರೊಡನೆ ಬರ ವೀಕ್ಷಣೆ ಮಾಡಲಾಗುತ್ತಿದೆ ಜಿಲ್ಲೆಯ ಹನೂರು ತಾಲ್ಲೂಕಿನ ಕೌದಳ್ಳಿ ಹುತ್ತೂರು, ಪಿ ಜಿ ಪಾಳ್ಯ, ದೊಮ್ಮನಗದ್ದೆ, ಅಜ್ಜಿಪುರ ಉಯಲುನತ್ತ ಜೋರೇದೊಡ್ಡಿ ಎಲ್ಲೇ ಮಾಳ ಮತ್ತಿತರ ಗ್ರಾಮಗಳಲ್ಲಿ ಬರ ವೀಕ್ಷಣೆ ಮಾಡಲಾಗುತ್ತಿದೆ. ಎಲ್ಲೆಲ್ಲಿ ಹಾನಿಯಾಗಿದೆಯೋ ಅಲ್ಲೆಲ್ಲ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ತೀರಾ ಹಿಂದುಳಿದಿದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪೂರ್ಣ ಪ್ರಮಾಣದ ಸಂಪುಟ ಸಭೆ ನಡೆಸಲಾಗಿದೆ ಆದರೂ ಅಭಿವೃದ್ಧಿ ಕಂಡಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗಳಿಗೆ, ಸಂಪುಟ ಸಭೆಯ ನಂತರ ಇಲ್ಲಿಗೆ ಸಾಕಷ್ಟು ಅನುದಾನಗಳನ್ನು ನೀಡಲಾಗಿದೆ, ಹಾಡಿಗಳಿಗೆ ದೀಪ ಹಾಗೂ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ನಾನು ಈ ಹಿಂದೆ ಶಾಸಕನಾಗಿದ್ದ ಅವಧಿಯಲ್ಲಿ ಸೋಲಿಗರ ಹಾಡಿಗಳ ಅಭಿವೃದ್ಧಿಗೆ ಅನೇಕ ಹೋರಾಟಗಳನ್ನು ಮಾಡಿದ್ದೆ,ಹನೂರು ಕ್ಷೇತ್ರದಲ್ಲಿ ಪಕ್ಷ ತಾರತಮ್ಯ ಮಾಡದೆ ಅಭಿವೃದ್ಧಿಯಾಗಲಿ ಎಂಬ ಉದ್ದೇಶದಿಂದ ಇಲ್ಲಿಗೆ ಅಂದಿನ ಮುಖ್ಯಮಂತ್ರಿಗಳು ಅನುದಾನ ನೀಡಿದ್ದರು ಎಂದು ಉತ್ತರಿಸಿದರು.
ಕುಡಿಯುವ ನೀರಿನ ಅಭಾವದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಭಾಗದಲ್ಲಿ ಕಳೆದ ಬಾರಿ ಹಾಗೂ ಈ ಬಾರಿ ಮಳೆಯಾಗದ ಹಿನ್ನೆಲೆಯಲ್ಲಿ ನೀರಿನ ಅಭವ ಇದೆ, ಪ್ರಕೃತಿ ಮುಂದೆ ನಾವು ಏನು ಮಾಡಲು ಸಾಧ್ಯವಿಲ್ಲ ಕಾಳ್ಗಿಚ್ಚು ಬರಕಿಂತಲೂ ಕೆಟ್ಟದು. ಇದರಿಂದಾಗಿ ಕಾಡು ನಾಶವಾಗುತ್ತದೆ ಇದರಿಂದ ಜನ ಜಾನುವಾರುಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಆದ್ದರಿಂದ ನಾವು ಕುಡಿಯಲು ನೀರು ಕೊಡುವುದು ಜಾನುವಾರುಗಳಿಗೆ ಮೇವು ಒದಗಿಸುವ ಕೆಲಸ ಮಾಡಬೇಕಿದೆ. ಅದಕ್ಕಾಗಿ ಪಶು ಸಂಗೋಪನೆ ಇಲಾಖೆ ಮೂಲಕ ಮೇವು ಬ್ಯಾಂಕ್ ಗಳನ್ನು ಕರೆಯುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಮಾನವ ಪ್ರಾಣಿ ಸಂಘರ್ಷದ ಕುರಿತು ಮಾತನಾಡಿದ ಪುಟ್ಟರಂಗ ಶೆಟ್ಟಿ,ಕಾಡಿನಲ್ಲಿ ಪ್ರಾಣಿಗಳಿಗೆ ನೀರು ಮತ್ತು ಮೇವು ಸಿಗದ ಕಾರಣ ನಾಡಿಗೆ ಬರುತ್ತಿವೆ ಕಾಡಿನಲ್ಲಿರುವ ಹುಲಿ ಚಿರತೆ ಸಿಂಹ ಮುಂತಾದ ಪ್ರಾಣಿಗಳಿಗೆ ಮಾಂಸಾಹಾರೇ ಬೇಕು ಜಿಂಕೆ ಕಡವೇ ಕಾಡೆಮ್ಮೆ ಇನ್ನಿತರ ಸಾಧು ಪ್ರಾಣಿಗಳು ಮೇವಿಗಾಗಿ ನಾಡಿಗೆ ಬರುತ್ತಿವೆ ಅವುಗಳನ್ನು ಹಿಮ್ಮೆಟ್ಟಿ ಕ್ರೂರ ಪ್ರಾಣಿಗಳು ಬರುತ್ತಿವೆ ಇದರಿಂದಾಗಿ ಮಾನವ ಪ್ರಾಣಿ ಸಂಘರ್ಷ ಏರ್ಪಟ್ಟಿದೆ ಇದನ್ನು ತಪ್ಪಿಸಲು ಅರಣ್ಯ ಇಲಾಖೆ ಸರ್ಕಾರ ಕ್ರಮ ವಹಿಸುತ್ತಿದೆ ಎಂದು ತಿಳಿಸಿದರು.
