ಮೈಸೂರು: ಅಂಚೆ ಕಚೇರಿಗಳಲ್ಲಿ ಹಣ ತುಂಬುವ ಚಲನ್ ಗಳು ಕನ್ನಡ ಭಾಷೆಯಲ್ಲಿ ಇರಬೇಕೆಂದು ಆಗ್ರಹಿಸಿ ಮಂಗಳವಾರ ಮೈಸೂರಿನ ಪ್ರಧಾನ ಅಂಚೆ ಕಚೇರಿ ಮುಂದೆ
ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಅಂಚೆ ಕಚೇರಿಗಳಲ್ಲಿ, ಗ್ರಾಹಕರು ಹಣ ಕಟ್ಟುವ ಉಳಿತಾಯ ಖಾತೆ, ಆರ್ ಡಿ, ಪಿಪಿಎಫ್ ಹಾಗೂ ಅಂಚೆ ಕಚೇರಿಯ ವಿವಿಧ ಯೋಜನೆಗಳಲ್ಲಿ ತೊಡಗಿಸಿರುವ ಹಣವನ್ನು ಅವಧಿ ಪೂರ್ಣವಾದ ನಂತರ ಹಿಂಪಡೆಯುವ ಯಾವುದೇ ರೀತಿಯ ಅಂಚೆ ಕಚೇರಿಯ ಚಲನ್ ಗಳು ಕನ್ನಡದಲ್ಲಿ ಇಲ್ಲದಿರುವುದು ಅತ್ಯಂತ ಖಂಡನೀಯ ಎಂದು ಪ್ರತಿಭಟನಾ ನಿರತರು ಬೇಸರ ವ್ಯಕ್ತಪಡಿಸಿದರು.
ಚಲನ್ ಒಂದು ಭಾಗದಲ್ಲಿ ಇಂಗ್ಲಿಷ್ ಭಾಷೆ ಹಾಗೂ ಮತ್ತೊಂದು ಭಾಗದಲ್ಲಿ ಹಿಂದಿಯಲ್ಲಿ ಮಾತ್ರ ಮುದ್ರಿತವಾಗಿರುವುದು ನಮ್ಮ ಕನ್ನಡಿಗರಿಗೆ ಅತ್ಯಂತ ನೋವಿನ ಸಂಗತಿಯಾಗಿದೆ ಹಾಗೂ ಇದು ಕನ್ನಡ ವಿರೋಧಿ ಧೋರಣೆಯಾಗಿದೆ. ಇದರಿಂದ ಹಿಂದಿ ಹಾಗೂ ಇಂಗ್ಲೀಷ್ ಬಾರದ ಕನ್ನಡಿಗರು ಚಲನ್ ತುಂಬಲು ಬೇರೆಯವರನ್ನು ಆಶ್ರಯಿಸಬೇಕಾಗಿರುವುದು ದುರದೃಷ್ಟಕರ ಎಂದು ಹೇಳಿದರು.
ನಮ್ಮ ನೆರೆಯ ತಮಿಳುನಾಡಿನಲ್ಲಿ ಒಂದು ಭಾಗದಲ್ಲಿ ಇಂಗ್ಲಿಷ್ ಮತ್ತೊಂದು ಭಾಗದಲ್ಲಿ ತಮಿಳು ಭಾಷೆಯಲ್ಲಿ ಚಲನ್ ಮುದ್ರಣವಾಗಿರುತ್ತದೆ.
ಪಕ್ಕದ ತಮಿಳುನಾಡಿನಲ್ಲಿ ತಮಿಳು ಭಾಷೆಯಲ್ಲಿ ಚಲನ್ ಮುದ್ರಿತವಾಗಿರುವಾಗ ನಮ್ಮ ರಾಜ್ಯದಲ್ಲಿ ಏಕೆ ಚಲನ್ ಕನ್ನಡದಲ್ಲಿ ಮುದ್ರಿತವಾಗಿಲ್ಲ, ನಮ್ಮ ರಾಜ್ಯ ಸರ್ಕಾರ, ರಾಜ್ಯದ ಮುಖ್ಯಮಂತ್ರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏನು ಮಾಡುತ್ತಿದೆ ಎಂದು ಪ್ರತಿಭಟನಾ ನಿರತರು ಕಾರವಾಗಿ ಪ್ರಶ್ನಿಸಿದರು.
ಅಂಚೆ ಕಚೇರಿ ಚಲನ್ ಗಳು ದೇಶದ ಯಾವುದೇ ರಾಜ್ಯದಲ್ಲಾದರೂ, ಆಯಾ ಸ್ಥಳೀಯ ಭಾಷೆಗಳಲ್ಲಿ ಮುದ್ರಿತವಾಗಬೇಕು. ಕರ್ನಾಟಕ – ಕನ್ನಡ ಎಂದರೆ ಅಷ್ಟೊಂದು ಅಸಡ್ಡೆಯೇ ಈ ಅಂಚೆ ಇಲಾಖೆಗೆ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಆಡಳಿತ ಭಾಷೆ ಎಲ್ಲಾ ಕನ್ನಡದಲ್ಲಿಯೇ ಇರಬೇಕು ಎಂದು ಹೇಳಿ, ಈಗ ಜನಪ್ರತಿನಿಧಿಗಳು ಇದರ ಕಡೆ ಗಮನ ಹರಿಸದೆ ಇರುವುದು ನಮ್ಮ ಕನ್ನಡಿಗರ ದೌರ್ಭಾಗ್ಯವೇ ಸರಿ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಈ ಅಂಚೆ ಕಚೇರಿಗೆ ಲೋಕಸಭೆಯಲ್ಲಿ, ನಮ್ಮ ರಾಜ್ಯದ ಎಲ್ಲಾ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಿ, ಅಂಚೆ ಕಚೇರಿ ಚಲನ್ ಗಳಲ್ಲಿ ಕನ್ನಡ ಭಾಷೆಯನ್ನು, ಕನ್ನಡವನ್ನು ಕಡ್ಡಾಯವಾಗಿ ಮುದ್ರಿಸಬೇಕು ಎಂದು ತೇಜೇಶ್ ಲೋಕೇಶ್ ಗೌಡ ಮತ್ತಿತರರು ಆಗ್ರಹಿಸಿದರು.
ಭಾರತೀಯ ಅಂಚೆ ಇಲಾಖೆಯು ಕನ್ನಡ ಭಾಷಾ ವಿರೋಧಿ ಧೋರಣೆಯನ್ನು ಕೈಬಿಟ್ಟು, ಕನ್ನಡ ಭಾಷೆಯಲ್ಲಿ ಈ ಕೂಡಲೇ ಚಲನ್ ಗಳನ್ನು ಮುದ್ರಿಸಬೇಕು. ಇಲ್ಲದಿದ್ದರೆ ಕನ್ನಡಿಗರೆಲ್ಲ ಸೇರಿ, ಅಂಚೆ ಕಚೇರಿಯನ್ನು ಬಹಿಷ್ಕಾರ ಮಾಡಿ, ರಾಜ್ಯದಲ್ಲಿರುವ ಎಲ್ಲಾ ಅಂಚೆ ಕಚೇರಿಗಳಿಗೆ ಬೀಗ ಹಾಕಿಸಬೇಕಾಗುತ್ತದೆ ಎಂದು
ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.
ಗೋಲ್ಡನ್ ಸುರೇಶ್, ಪ್ರಭುಶಂಕರ್, ಪ್ರಜೀಶ್, ಕೃಷ್ಣಪ್ಪ, ಡಾ. ಮೊಗಣ್ಣಾಚಾರ್, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ, ಸಿಂಧುವಳ್ಳಿ ಶಿವಕುಮಾರ್, ನೇಹ, ಡಾ. ನರಸಿಂಹೇಗೌಡ, ಭಾಗ್ಯಮ್ಮ, ಮಂಜುಳಾ, ಜ್ಯೋತಿ, ಗೀತಾಗೌಡ, ಇಂದಿರಾ, ಸುಜಾತಾ, ರಾಧಾಕೃಷ್ಣ, ವಾಣಿ, ಗೀತಾ, ತಾಯೂರು ಗಣೇಶ್, ಬಸವರಾಜು , ಪ್ರಭಾಕರ್, ಶಿವರಾಂ, ಶ್ರೀನಿವಾಸ್ , ಅಶೋಕ್, ನಾರಾಯಣಗೌಡ,ರಘು ಅರಸ್, ದರ್ಶನ್ ಗೌಡ, ತ್ಯಾಗರಾಜ್, ರವಿ ನಾಯಕ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
