ವಿಜಯಪುರ: ಮೈಸೂರು ಜಿಲ್ಲೆಯ ಹುಣಸೂರು ಬಸ್ ನಿಲ್ದಾಣದ ಬಳಿ ಹಾಡಹಗಲೇ ಆಭರಣದ ಅಂಗಡಿ ದರೋಡೆ ಮಾಸುವ ಮುನ್ನವೇ ವಿಜಯಪುರದಲ್ಲೂ ಚಿನ್ನದ ಅಂಗಡಿಯಲ್ಲೂ ನಡೆದಿದೆ.
ಹೆಲ್ಮೆಟ್ ಧರಿಸಿ ಬಂದಿದ್ದ ಇಬ್ಬರು ಕಂಟ್ರಿ ಪಿಸ್ತೂಲ್ ತೋರಿಸಿ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದ ಚಿನ್ನದ ಅಂಗಡಿಯಲ್ಲಿ ದರೋಡೆ ಮಾಡಿದ್ದು ಇಡೀ ಜಿಲ್ಲೆಯ ಜನ ಆತಂಕಕ್ಕೆ ಒಳಗಾಗಿದ್ದಾರೆ.
ಮಹಾರುದ್ರ ಕಂಚಗಾರ ಅವರ ಆಭರಣದ ಅಂಗಡಿಯಲ್ಲಿ ದರೋಡೆ ನಡೆದಿದ್ದು, ಅಂಗಡಿಗೆ ಬಂದಿದ್ದ ಮಹಿಳೆಗೂ ಪಿಸ್ತೂಲ್ ತೋರಿಸಿ ಹೆದರಿಸಿ ಕಳುಹಿಸಿದ್ದಾರೆ.
ದರೋಡೆಕೋರರು ಗಾಳಿಯಲ್ಲಿ 2 ಸುತ್ತು ಗುಂಡು ಹಾರಿಸಿದ್ದು, ಆತ್ಮಲಿಂಗ ಹೂಗಾರ ಎಂಬುವರಿಗೆ ಕಾಲಿಗೆ ಬುಲೆಟ್ ತಾಗಿ ಗಾಯಗೊಂಡಿದ್ದಾರೆ.
205 ಗ್ರಾಂ ಬಂಗಾರದ ಆಭರಣ ಮತ್ತು 1 ಕೆ.ಜಿ. ಬೆಳ್ಳಿ ದೋಚಿದ ಆರೋಪಿಗಳು ಮಹಾರಾಷ್ಟ್ರದತ್ತ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆಎಸ್ ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ರಾಮನಗೌಡ ಹಟ್ಟಿ,ಡಿವೈಎಸ್ ಪಿ ಕಟ್ಟಿಮನಿ, ಇನ್ಸ್ಪೆಕ್ಟರ್ ಪರಶುರಾಮ ಮನಗೂಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆರೋಪಿಗಳು ದರೋಡೆ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ದರೋಡೆಕೋರರ ಬಂಧನಕ್ಕೆ ಬಲೆ ಬೀಸಲಾಗಿದೆ.
