ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಎಲ್ಲ ಮೀಸಲು ಕ್ಷೇತ್ರ ವ್ಯಾಪ್ತಿಗೆ ಸೇರಿರುವ ಯಳಂದೂರು ತಾಲೂಕಿನ ಅಗರ, ಮದ್ದೂರು ಕೆರೆಗಳಿಂದ ಬೆಂಗಳೂರು ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಕೆ ಮಾಡುವುದರಿಂದ ಸ್ಥಳೀಯ ರೈತರಿಗೆ ತೊಂದರೆ ಇಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದರು.
ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಕಾವೇರಿ ನದಿ ನೀರು ಒದಗಿಸಲು ಚಾಮರಾಜನಗರ ಜಿಲ್ಲೆಯ ಅಗರ ಮತ್ತು ಮದ್ದೂರು ಕೆರೆಗಳ ಸಾಮರ್ಥ್ಯವನ್ನು ಹೆಚ್ಚು ಮಾಡಿ, ಅಲ್ಲಿಂದ ಪಂಪ್ ಮಾಡಲು ಯೋಜನೆ ರೂಪಿಸಿದ್ದು, ಇದರಿಂದ ಹಾಲಿ ಒಂದು ಬೆಳೆ ಬೆಳೆಯುತ್ತಿರುವ ಅಚ್ಚುಕಟ್ಟು ಪ್ರದೇಶದ ರೈತರು ಮುಂದಿನ ದಿನಗಳಲ್ಲಿ ವರ್ಷಕ್ಕೆ ಎರಡು ಬೆಳೆ ಬೆಳೆಯಲಿದ್ದಾರೆ ಎಂದು ಹೇಳಿದರು.
ಖನಿಜ ಭವನದಲ್ಲಿ ಬುಧವಾರ ತಮ್ಮನ್ನು ಭೇಟಿಯಾದ ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರೊಂದಿಗೆ ಸಚಿವರು ವಿಚಾರ ವಿನಿಮಯ ನಡೆಸಿ, ಸಂಶಯ ಬಗೆಹರಿಸಿದ್ದಾರೆ. ಅಲ್ಲದೆ, ಆದಷ್ಟು ಬೇಗ ಈ ಬಗ್ಗೆ ರೈತರ ಸಭೆಯನ್ನೂ ಏರ್ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾವೇರಿ ನ್ಯಾಯಮಂಡಳಿ ಕೈಗಾರಿಕಾ ಉದ್ದೇಶಕ್ಕೆ 4 ಟಿಎಂಸಿ ನೀರು ಮೀಸಲಿಟ್ಟಿದೆ. ಅದರಲ್ಲಿ ಸದ್ಯ 1.37 ಟಿಎಂಸಿ ನೀರು ಬಳಕೆ ಮಾಡಲಾಗುತ್ತಿದೆ. ಉಳಿದ 2.63 ಟಿಎಂಸಿ ಪೈಕಿ 2.5 ಟಿಎಂಸಿ ನೀರನ್ನು ಬೆಂಗಳೂರಿನ ಕೈಗಾರಿಕಾ ಪ್ರದೇಶಗಳಿಗೆ ಪಂಪ್ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ಕೃಷಿ ಗೆ ಮೀಸಲಿಟ್ಟಿರುವ ಕಾವೇರಿ ನೀರನ್ನು ಬಳಸುತ್ತಿಲ್ಲ. ಬದಲಿಗೆ ಕೈಗಾರಿಕೆ ಸಲುವಾಗಿ ಮೀಸಲಿಟ್ಟಿರುವ ನೀರನ್ನು ಬಳಸಲಾಗುತ್ತಿದೆ, ಮಳೆಗಾಲದಲ್ಲಿ 120 ದಿನ ನೇರವಾಗಿ ಕಾವೇರಿ ನದಿಯಿಂದಲೇ ನೀರನ್ನು ಪಂಪ್ ಮಾಡಲಾಗುವುದು. ಉಳಿದ ದಿನಗಳಲ್ಲಿ ಈ ಕೆರೆಗಳಿಂದ ನೀರು ಪಂಪ್ ಮಾಡಲಾಗುವುದು. ಈ ಕೆರೆಗಳ ನೀರಿನ ಸಾಮರ್ಥ್ಯವನ್ನು ಹತ್ತುಪಟ್ಟು ಹೆಚ್ವಿಸಲಾಗುವುದು. ಇದರಿಂದ ರೈತರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಕೆರೆಗಳ ಆಳವನ್ನು ಜಾಸ್ತಿ ಮಾಡಲಾಗುವುದೇ ವಿನಾ ಹೊಸ ಜಮೀನಿನ ಸ್ವಾಧೀನವೇನೂ ಇರುವುದಿಲ್ಲ. ಈ ಯೋಜನೆಯಿಂದ ಕೆರೆಗಳ ಅಚ್ಚುಕಟ್ಟು ವ್ಯಾಪ್ತಿಯಲ್ಲಿನ ರೈತರಿಗೆ ಯಾವ ತೊಂದರೆಯೂ ಆಗುವುದಿಲ್ಲ. ಈಗ ಅವರಿಗೆಲ್ಲ ವರ್ಷಕ್ಕೆ ಒಂದು ಬೆಳೆಗಷ್ಟೇ ನೀರು ಕೊಡಲಾಗುತ್ತಿದೆ. ಆದರೆ, ಯೋಜನೆ ಮುಗಿದ ನಂತರ ಅಚ್ಚುಕಟ್ಟು ಪ್ರದೇಶ ಹೆಚ್ಚಳದ ಜತೆಗೆ ಎರಡು ಬೆಳೆಗಳಿಗೆ ನೀರು ಕೊಡಲಾಗುವುದು. ಕೃಷ್ಣಮೂರ್ತಿಯವರಿಗೂ ಇದನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದು ಎಂ.ಬಿ.ಪಾಟೀಲ ವಿವರಿಸಿದ್ದಾರೆ.
ಇದಲ್ಲದೆ, ಈ ಕೆರೆಗಳ ಕೆಳಭಾಗದಲ್ಲಿ ಇರುವ ಚಿಕ್ಕಹೊಳೆ ಮತ್ತು ಸುವರ್ಣಮುಖಿ ಕೆರೆಗಳನ್ನು ಕೂಡ ನಾವು ಅಭಿವೃದ್ಧಿ ಪಡಿಸಲಿದ್ದೇವೆ. ಇಲ್ಲಿಯ ನೀರು ಕೂಡ ರೈತರಿಗೆ ವರ್ಷವಿಡೀ ಲಭ್ಯವಾಗಲಿದೆ. ಈ ಯೋಜನೆಯಿಂದ ಅಂತರ್ಜಲ ವೃದ್ಧಿ, ಮೀನುಗಾರಿಕೆ, ದೋಣಿ ವಿಹಾರ ಮತ್ತು ಪ್ರವಾಸೋದ್ಯಮದ ಬೆಳವಣಿಗೆ ಕೂಡ ಆಗಲಿದೆ. ರೈತರು ಗಾಳಿಮಾತುಗಳಿಗೆ ಕಿವಿಗೊಡಬಾರದು ಎಂದು ತಿಳಿಹೇಳಿದರು.
ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಮಾತನಾಡಿ, ಕೈಗಾರಿಕಾ ಪ್ರದೇಶಗಳಿಗೆ ಬೇಕಾದ ನೀರು ಪೂರೈಕೆಗೆ ಅಗತ್ಯವಿರುವ ಜಲ ಸಂಗ್ರಹಾಗಾರಕ್ಕೆ ಅಗರ ಮತ್ತು ಮದ್ದೂರು ಕೆರೆಗಳಿರುವ ಜಾಗವು ಅತ್ಯಂತ ಸೂಕ್ತವಾಗಿದೆ. ಬೇರೆ ಕಡೆಗಳಲ್ಲಿ ಮಾಡಿದರೆ ಉದ್ದೇಶವೇ ಈಡೇರುವುದಿಲ್ಲ. ಜತೆಗೆ ಈಗಿನ ಯೋಜನೆಯಿಂದ ಸ್ಥಳೀಯ ರೈತರಿಗೆ ಮೊದಲಿಗಿಂತ ಹೆಚ್ಚು ನೀರಾವರಿ ಅನುಕೂಲ ಒದಗಿಸಲು ಸಾಧ್ಯ ಎಂದು ಶಾಸಕರಿಗೆ ಮನದಟ್ಟು ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಖುಷ್ಬು ಗೋಯಲ್, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಮತ್ತು ಕೆಐಎಡಿಬಿ ಮುಖ್ಯ ಎಂಜಿನಿಯರ್ ವೀರಭದ್ರಯ್ಯ, ನೀರಾವರಿ (ದಕ್ಷಿಣ) ಇಲಾಖೆ ಮುಖ್ಯ ಎಂಜಿನಿಯರ್ ಮಹೇಶ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
