ಮೈಸೂರು: ಪ್ರಿಯಕರನೊಂದಿಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಯೂಟ್ಯೂಬ್ ನೋಡಿ ಲವರ್ ಜತೆ ಸೇರಿ ಪತ್ನಿ ಕೊಲೆ ಮಾಡಿರುವ ಹೇಯ ಘಟನೆ ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.
ಯುಟ್ಯೂಬ್ ನೋಡಿ ಇಡ್ಲಿಗೆ ದತ್ತೂರಿ ಬೀಜದ ಪುಡಿ ಬೆರೆಸಿ, ಬಳಿಕ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹುಣಸೂರಿನ ವಿನೋಬ ಕಾಲೋನಿಯಲ್ಲಿ ನಡೆದಿದೆ.
ಗಾರೆ ಕೆಲಸ ಮಾಡುತ್ತಿದ್ದ ರಾಮಪ್ರಸಾದ್ (35) ಕೊಲೆಯಾದ ದುರ್ದೈವಿ.
ಮೈಸೂರಿನ ಕೆಸರೆ ನಿವಾಸಿ ಪವಿತ್ರಳನ್ನು ಮದುವೆಯಾಗಿದ್ದ ರಾಮಪ್ರಸಾದ್ ದಂಪತಿಗೆ 11 ವರ್ಷದ ಗಂಡು ಮಗು ಹಾಗೂ 9 ವರ್ಷದ ಹೆಣ್ಣು ಮಕ್ಕಳಿವೆ.
ಅದೇ ಗ್ರಾಮದ ಸುನೀಲ್ ಎಂಬಾತನೊಂದಿಗೆ ಪವಿತ್ರ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಚಾರವಾಗಿ ಪತಿ-ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಅ.16 ರಂದು ಕುಡಿದು ಬಂದಿದ್ದ ರಾಮಪ್ರಸಾದ್ ಗೆ ಇಡ್ಲಿಯಲ್ಲಿ ದತ್ತೂರಿ ಬೀಜದ ಪುಡಿ ಬೆರೆಸಿ ತಿನ್ನಿಸಿದ್ದಾಳೆ. ಯೂಟ್ಯೂಬ್ ನಲ್ಲಿ ದತ್ತೂರಿ ಬೀಜದ ಕುರಿತು ಮಾಹಿತಿ ಪಡೆದು ಈ ಕೃತ್ಯ ಎಸಗಿದ್ದಾಳೆ. ಇದಕ್ಕೂ ಸಾಯದಿದ್ದಾಗ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
ಬಳಿಕ ರಾಮಪ್ರಸಾದ್ ಸಹೋದರ ಚಂದ್ರಹಾಸಗೆ ಕರೆ ಮಾಡಿದ ಪವಿತ್ರ, ಮೊಸರು ತಿಂದು ಮಲಗಿದ ನಿನ್ನ ಅಣ್ಣ ಎದ್ದೇಳುತ್ತಿಲ್ಲ ಎಂದು ಹೇಳಿದ್ದಾಳೆ.
ತಕ್ಷಣ ಅಣ್ಣನನ್ನು ಆಸ್ಪತ್ರೆಗೆ ಕೊಂಡೊಯ್ದ ಚಂದ್ರಹಾಸಗೆ ಆತ ಮೃತಪಟ್ಟಿರುವುದು ತಿಳಿದಿದೆ. ಸ್ವಗ್ರಾಮದಲ್ಲಿ ಅಂತ್ಯಕ್ರಿಯೆಯನ್ನೂ ಮುಗಿಸಲಾಯಿತು.
ಅದೇ ದಿನ ರಾತ್ರಿ ಆರೋಪಿ ಸುನೀಲ್ ಮನೆಗೆ ಬಂದಿದ್ದದ್ದರ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇದರಿಂದ ಅನುಮಾನಗೊಂಡ ಸಹೋದರ ಚಂದ್ರಹಾಸ ಪೊಲೀಸರಿಗೆ ದೂರು ನೀಡಿದ್ದು,ಪೊಲೀಸರ ತನಿಖೆಯಲ್ಲಿ ಘಟನೆಯ ಸತ್ಯಾಂಶ ಬಯಲಾಗಿದೆ.
ಪವಿತ್ರ ಹಾಗೂ ಪ್ರಿಯಕರ ಸುನೀಲ್ ಇಬ್ಬರನ್ನು ಹುಣಸೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದು,ಕಂಬಿ ಎಣಿಸುತ್ತಿದ್ದಾರೆ.
