ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರು ಮೋಜು-ಮಸ್ತಿಗಾಗಿ ವಿದೇಶ ಪ್ರವಾಸ ಕೈಗೊಳ್ಳುವುದಿಲ್ಲ ದೇಶದ ಹಿತಕ್ಕಾಗಿ ಪ್ರವಾಸ ಮಾಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕಾಂಗ್ರಸಿಗರಿಗೆ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ಮೋಜು-ಮಸ್ತಿಗಾಗಿ ವಿದೇಶ ಪ್ರವಾಸ ಕೈಗೊಳ್ಳುವುದಿಲ್ಲ. ದೇಶದ ಹಿತಾಸಕ್ತಿ ಮತ್ತು ರಾಜತಾಂತ್ರಿಕ ಸಂಬಂಧಗಳಿಗಾಗಿ ಅವರು ವಿದೇಶಕ್ಕೆ ತೆರಳುತ್ತಾರೆ. ಅವರು ಕೆಲವೊಮ್ಮೆ ರೇಷ್ಮೆ ಸೀರೆ, ರೇಷ್ಮೆ ಪಂಚೆಯಂತಹ ಬೆಲೆಬಾಳುವ ವಸ್ತುಗಳನ್ನು ಸಾಂಪ್ರದಾಯಿಕವಾಗಿ ಉಡುಗೊರೆಯಾಗಿ ನೀಡುತ್ತಾರೆ. ಆದರೆ ಉಡುಗೊರೆ ನೀಡುವುದನ್ನೂ ಕೆಟ್ಟ ದೃಷ್ಟಿಯಿಂದ ನೋಡುವ ಕಾಂಗ್ರೆಸ್ ನಾಯಕರ ಮನಸ್ಥಿತಿಯೇ ಹಾಳಾಗಿದೆ ಎಂದು ವ್ಯಂಗ್ಯವಾಡಿದರು.
ಇಟಲಿ ಪ್ರವಾಸದ ವೇಳೆ ಮೋದಿ ಅವರು ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ‘ಮೆಲೋಡಿ’ ಚಾಕೊಲೇಟ್ ಉಡುಗೊರೆ ನೀಡಿದ್ದ ವಿಚಾರವನ್ನು ಸಮರ್ಥಿಸಿಕೊಂಡರು.
ಮಧ್ಯಪ್ರಾಚ್ಯದಲ್ಲಿನ ಯುದ್ಧ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ ಅವರು, “ಭಾರತ ಎಂದಿಗೂ ಯುದ್ಧವನ್ನು ಬಯಸಿರಲಿಲ್ಲ. ಆದರೆ ಯುದ್ಧದ ಪರಿಣಾಮಗಳು ಭಾರತದ ಮೇಲೂ ಆಗುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿಯವರು ದೇಶಕ್ಕೆ ಯಾವುದೇ ಕೆಟ್ಟ ಪರಿಣಾಮ ಬಾರದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ ಎಂದು ತಿಳಿಸಿದರು.
