ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುತ್ತೂರು ಶ್ರೀಗಳ ಜೊತೆ 2 ತಾಸಿಗೂ ಹೆಚ್ಚು ಕಾಲ ಸುಧೀರ್ಘ ಗುಪ್ತ ಮಾತುಕತೆ ನಡೆಸಿದ್ದು,ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ಶ್ತೀಗಳ ಜತೆ ರಾಜ್ಯ ರಾಜಕಾರಣದ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದು, ಸಿಎಂ ಹುದ್ದೆಯ ಪದತ್ಯಾಗದ ಕುರಿತು ಸಿದ್ದು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮುಂಬರುವ ಚುನಾವಣೆ ದೃಷ್ಟಿಯಿಂದಲೂ ಚರ್ಚೆ ನಡೆದಿದೆ. ಸ್ಟಿಂಗ್ ರಾಜಕಾರಣದ ಕೋಲಾಹಲದ ಕುರಿತು ಶ್ರೀಗಳ ಜೊತೆ ಚರ್ಚೆ ನಡೆಸಿ ಮುಂದಿನ ನಡೆ ಕುರಿತು ಸಿದ್ದರಾಮಯ್ಯ ಸಲಹೆ ಪಡೆದಿದ್ದಾರೆ.
ಇದೇ ಮೊದಲ ಬಾರಿಗೆ ಮಾಜಿ ಸಿಎಂ, ಶ್ರೀಗಳ ಜೊತೆ ಸುಧೀರ್ಘವಾಗಿ ಚರ್ಚೆ ನಡೆಸಿದ್ದಾರೆ. ವರುಣಾ ವಿಧಾನಸಭೆ ವ್ಯಾಪ್ತಿಗೆ ಬರುವ ಸುತ್ತೂರು ಮಠ ಪ್ರತಿ ರಾಜಕೀಯ ಏರಿಳಿತದ ಸಂದರ್ಭದಲ್ಲಿ ಶಕ್ತಿ ಕೇಂದ್ರವಾಗುತ್ತದೆ.
ನನ್ನನ್ನು ಬ್ಲಾಕ್ ಮೇಲ್ ಮಾಡಲು ಯತ್ನ:
ಸುತ್ತೂರು ಶ್ರೀಗಳನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ,ನನ್ನನ್ನು ಬ್ಲಾಕ್ ಮೇಲ್ ಮಾಡಲು ಪ್ರಯತ್ನ ಮಾಡಲಾಗಿತ್ತು. ಈ ವರ್ಷದ ಸೆಪ್ಟೆಂಬರ್ ನಲ್ಲಿ ಈ ವಿಚಾರ ಗೊತ್ತಾಯಿತು ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಸ್ಟಿಂಗ್ ವಿಚಾರ ಕುರಿತು ಸುದೀರ್ಘ ಹೇಳಿಕೆ ನೀಡಿದ್ದಾರೆ.
ನನ್ನನ್ನು ಬ್ಲಾಕ್ ಮೇಲ್ ಮಾಡಲು ಪ್ರಯತ್ನ ಮಾಡಲಾಗಿತ್ತು. ಈ ವರ್ಷದ ಸೆಪ್ಟೆಂಬರ್ ನಲ್ಲಿ ಈ ವಿಚಾರ ಗೊತ್ತಾಯಿತು. ಒಬ್ಬ ಪತ್ರಕರ್ತ ಹಾಗೂ ಮತ್ತೊಬ್ಬ ಮಹಿಳೆ ಇದನ್ನು ಮಾಡಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕು. ನನಗೆ ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿಲ್ಲ. ಜನರಿಗೆ ಸತ್ಯ ಗೊತ್ತಾಗಬೇಕೆಂಬ ಕಾರಣಕ್ಕಾಗಿಯೇ ನಾನು ದೂರು ಕೊಟ್ಟಿದ್ದೇನೆ. ಇದು ಸುಳ್ಳಿನ ಆರೋಪ. ಇದರಲ್ಲಿ ಯಾವ ಸತ್ಯಾಂಶವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
8 ವರ್ಷ ಸಿಎಂ ಅವಧಿಯಲ್ಲಿ ಇಂತಹ ಯತ್ನ ನಡೆದಿರಲಿಲ್ಲ. ಈಗ ಇದು ನಡೆದಿದೆ. ಸ್ಟಿಂಗ್ ಮಾಡಿದವರ ಉದ್ದೇಶ ಸಫಲವಾಗುವುದಿಲ್ಲ. ನನ್ನ ಮೇಲೆ ಯಾವತ್ತೂ ಇಂತಹ ಆರೋಪ ಬಂದೇ ಇರಲಿಲ್ಲ. ವಿಚಾರ ಗೊತ್ತಾದ ಕೂಡಲೇ ನಾನೇ ಸ್ವಯಂಪ್ರೇರಿತವಾಗಿ ದೂರು ಕೊಟ್ಟಿದ್ದೇನೆ ಎಂದು ತಿಳಿಸಿದರು
ನನ್ನ ಪರವಾಗಿ ಯಾರೂ ಇರೋದು ಬೇಡ. ನನಗೆ ಯಾರ ನೈತಿಕ ಬೆಂಬಲವೂ ಬೇಡ. ಯಾಕೆಂದರೆ ನಾನು ಈ ಪ್ರಕರಣದಲ್ಲಿ ತಪ್ಪು ಮಾಡಿಲ್ಲ. ತಪ್ಪೇ ಮಾಡಿಲ್ಲದ ಮೇಲೆ ಬೆಂಬಲ ಯಾಕೆ ಬೇಕು. ರಾಜಕೀಯ ಕಾರಣಕ್ಕೆ ಕೆಲವರು ಮಾತನಾಡುತ್ತಿದ್ದಾರೆ, ಮಾತನಾಡಲಿ. ನನಗೆ ಸರ್ಕಾರದ ತನಿಖೆ ಮೇಲೆ ನಂಬಿಕೆ ಇದೆ. ಇದಕ್ಕೆ ಎಸ್ಐಟಿ ಅಥವಾ ಇನ್ನೂ ಉನ್ನತ ಮಟ್ಟದ ತನಿಖೆ ಅಗತ್ಯ ಇಲ್ಲ ಎಂದು ಹೇಳಿದರು.
ಡಿ.ಕೆ ಸರ್ಕಾರದ ನಡೆಯ ಬಗ್ಗೆ ಮೊದಲ ಬಾರಿಗೆ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ, ದಸರಾ ಉಸ್ತುವಾರಿಗೆ ಒಂದು ದಿನಕ್ಕೆ ಮೂವರು ಮೇಲುಸ್ತುವಾರಿಯನ್ನು ನೇಮಿಸುವ ಅಗತ್ಯ ಇರಲಿಲ್ಲ. ಮೇಲುಸ್ತುವಾರಿ ವಹಿಸಿದ ಯಾರೊಬ್ಬರೂ ಬರಲಿಲ್ಲ. ಆದರೂ ಸರ್ಕಾರ ಮೇಲುಸ್ತುವಾರಿಯನ್ನು ನೇಮಿಸಿತ್ತು. ಯಾಕೆ ನೇಮಿಸಿದರು ನನಗೆ ಗೊತ್ತಿಲ್ಲ. ಇದು ನನ್ನ ಸರ್ಕಾರ ಅಲ್ಲ, ಇದು ಬೇರೆ ಸರ್ಕಾರ. ಅದು ಮುಖ್ಯಮಂತ್ರಿಗಳ ನಿರ್ಧಾರ. ನಾನೇನು ಮಾಡಲಿ ಎಂದು ಹೇಳಿದರು.
