ಯಾದಗಿರಿ : ಜಿಲ್ಲೆಯ ವಡಗೇರಾ ಪಟ್ಟಣದ ಸರ್ಕಾರಿ ಪ್ರೌಢಶಾಲಾ ಆವರಣದ ಹಿಂದೆ ಸಣ್ಣ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಮೃತದೇಹ ಪತ್ತೆಯಾಗಿದ್ದು ಸಾಕಷ್ಟು ಅನುಮಾನ ಹುಟ್ಟಿ ಹಾಕಿದೆ.
ಹತ್ತನೇ ತರಗತಿ ವಿದ್ಯಾರ್ಥಿ ಪವನ ಮಲ್ಲಪ್ಪ ಪೂಜಾರಿ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಎಂದಿನಂತೆ ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಮನೆಯಿಂದ ಶಾಲೆಗೆ ಹೊರಟ ಪವನ ಮಲ್ಲಪ್ಪ, ಬೆಳಿಗ್ಗೆ ಶಾಲೆಯಲ್ಲಿ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಭಾಗವಹಿಸಿದ್ದ.ನಂತರ ತರಗತಿಗಳಿಗೂ ಹಾಜರಾಗಿ ಶಾಲೆಯಲ್ಲಿ ಆಯೋಜಿಸಿದ್ದ ಕಿರು ಪರೀಕ್ಷೆಯನ್ನು ಬರೆದಿದ್ದ.
ಆದರೆ,ಮಧ್ಯಾಹ್ನ ಸುಮಾರು ೨ ಗಂಟೆಗೆ ವಿದ್ಯಾರ್ಥಿಗಳು ಶಾಲಾ ಕಟ್ಟಡದ ಹಿಂದೆ ಮೂತ್ರ ವಿಸರ್ಜನೆಗೆ ಹೋದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪವನನ ದೇಹ ಕಂಡು ಗಾಬರಿಯಿಂದ ಶಿಕ್ಷಕರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಎಸ್ ಪಿ ಪೃಥ್ವಿಕ್ ಶಂಕರ, ಜಿಪಂ ಸಿಇಒ ಲವೀಶ್ ಓರಡಿಯಾ, ಕಂದಾಯ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ವಡಗೇರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಿದ್ಯಾರ್ಥಿ ಸಾವಿಗೆ ಸರಿಯಾದ ಕಾರಣ ಗೊತ್ತಾಗಿಲ್ಲ,ಆತ್ಮಹತ್ಯೆಯೊ,ಅಥವಾ ಇನ್ನೇನೊ ಎಂಬುದು ಮರಣೋತ್ತರ ವರದಿ ಬಂದ ನಂತರ ಗೊತ್ತಾಗಬೇಕಿದೆ.
ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಸ್ಥಳಕ್ಕೆ ಬೇಟಿ ನೀಡಿ, ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧರಿಸಿ ಕುಟುಂಬಸ್ಥರಿಂದ ಅರ್ಜಿ ಸ್ವೀಕರಿಸಿ ಸೂಕ್ತ ತನಿಖೆ ನಡೆಸಿ ಕುಟುಂಬಸ್ಥರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಸರ್ಕಾರದ ಗಮನಕ್ಕೆ ತಂದು ಸರ್ಕಾರದಿಂದ ಸಿಗುವ ಪರಿಹಾರ ಹಾಗೂ ಕುಟುಂಬಸ್ಥರಿಗೆ ನೌಕರಿಯನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಮುಖಂಡರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸರಿಯಾದ ತನಿಖೆ ನಡೆಸಿ ಕುಟುಂಬಸ್ಥರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
