ಮೈಸೂರು: ಮೌಲ್ಯಮಾಪನ ಎಂದರೆ ಕೇವಲ ಅಂಕಗಳನ್ನು ನೀಡುವುದಲ್ಲ,ವಿದ್ಯಾರ್ಥಿಗಳು ವಿಷಯವನ್ನು ಎಷ್ಟು ಗ್ರಹಿಸಿದ್ದಾರೆ ಎಂಬುದನ್ನು ವಿಶ್ಲೇಷಿಸುವ ಅಗತ್ಯವಿದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಮಂಜುಶ್ರೀ ಎನ್ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು,ಕಾಲೇಜು ಶಿಕ್ಷಣ ಇಲಾಖೆ ಮತ್ತು ಮೈಸೂರು ವಲಯದ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ ಸಂಯುಕ್ತಾಶ್ರಯದಲ್ಲಿ ಸರ್ಕಾರಿ, ಅನುದಾನಿತ ಪದವಿ ಕಾಲೇಜಿನ ಪ್ರಾಧ್ಯಾಪಕರಿಗೆ ಮೈಸೂರಿನ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ
ಆಯೋಜಿಸಿದ್ದ ರೂಸ ಪ್ರಾಯೋಜಿತ ಒಂದು ದಿನದ ಪ್ರಾದೇಶಿಕ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾರದರ್ಶಕ ಕ್ರಿಯಾಶೀಲ ಟೀಕಾ ಮನೋಭಾವವನ್ನು ಹೆಚ್ಚಿಸುವ ಮೌಲ್ಯಮಾಪನ ವಿಧಗಳು ಇಂದಿನ ಅಗತ್ಯತೆ, ವೈವಿಧ್ಯ ಹಿನ್ನೆಲೆಯನ್ನು ಹೊಂದಿರುವ ವಿದ್ಯಾರ್ಥಿಗಳಿರುವ ತರಗತಿಗಳಲ್ಲಿ ಬೋಧಕರು ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಎನ್. ಕೆ ಲೋಕನಾಥ್ ಅವರು, ತಂತ್ರಜ್ಞಾನ ಬೆಳೆದಂತೆ ಇಂದಿನ ಶಿಕ್ಷಣದ ಸ್ವರೂಪ ಬದಲಾಗುತ್ತಿದೆ. ವಿದ್ಯಾರ್ಥಿಗಳ ಗಮನ ಕೇವಲ 10 -15 ನಿಮಿಷಗಳಿಗೆ ಸೀಮಿತವಾಗಿದೆ. ಪ್ರಾಧ್ಯಾಪಕರು ಇಂದಿನ ಶಿಕ್ಷಣ ವ್ಯವಸ್ಥೆಯ ಅಗತ್ಯತೆಗೆ ತಕ್ಕ ಹಾಗೆ ತಮ್ಮನ್ನು ನವೀಕರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಉತ್ತಮ ಸಮಾಜವನ್ನು ನಿರ್ಮಿಸುವ ಸಾಮರ್ಥ್ಯ ಶಿಕ್ಷಕರಿಗಿದೆ, ಶಿಕ್ಷಣದ ಉದ್ದೇಶ ಕೇವಲ ನೌಕರಿ ಪಡೆಯುವುದಲ್ಲ, ಜ್ಞಾನಾರ್ಜನೆ, ಮತ್ತು ಕೌಶಲ್ಯ ವೃದ್ಧಿ ಶಿಕ್ಷಣದ ಮೂಲ ಉದ್ದೇಶವಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಶಿಕ್ಷಣ ಇಲಾಖೆಯ ಮೈಸೂರು ಪ್ರಾದೇಶಿಕ ವಲಯದ ಜಂಟಿ ನಿರ್ದೇಶಕರಾದ ಡಾ. ಪ್ರತಿಮಾ ಡಿ.ಎಸ್ ಅವರು ಮಾತನಾಡಿ, ಮೌಲ್ಯ ಆಧಾರಿತ ಮತ್ತು ಕೌಶಲ್ಯ ಆಧಾರಿತ ಶಿಕ್ಷಣ ಇಂದಿನ ಅಗತ್ಯ.ಆ ನಿಟ್ಟಿನಲ್ಲಿ ಪ್ರಾಧ್ಯಾಪಕರಿಗೆ ಆಯೋಜಿಸಿರುವ ಈ ಕಾರ್ಯಕ್ರಮದ ಮೂಲಕ ಗುಣಮಟ್ಟದ ಶಿಕ್ಷಣ ಮತ್ತು ಒಳಗೊಳ್ಳುವಿಕೆಯನ್ನು ಸಾಧಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜು ಶಿಕ್ಷಣ ಇಲಾಖೆಯ ಪ್ಲೇಸ್ಮೆಂಟ್ ಸೆಲ್ ನ ರಾಜ್ಯ ನೋಡಲ್ ಅಧಿಕಾರಿ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಎ ನಾರಾಯಣ ಪ್ರಸಾದ್, ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊ ಸುತ್ತೂರು ಎಸ್ ಮಾಲಿನಿ ತರಬೇತಿ ನೀಡಿದರು.
ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಗ್ರಂಥ ಪಾಲಕರು ಹಾಗೂ ಐಕ್ಯೂ ಏ ಸಿ ಸಂಚಾಲಕರಾದ ಡಾ ಮುತ್ತುರಾಜ ಎಸ್ ಎಲ್ಲರನ್ನು ಸ್ವಾಗತಿಸಿದರು. ವಾಣಿಜ್ಯ ಸಹಪ್ರಾಧ್ಯಾಪಕರಾದ ಕ್ಯಾಪ್ಟನ್ ಏನ್ ಸಿ ಶಿವಕುಮಾರ್ ವಂದನಾರ್ಪಣೆ ನೆರವೇರಿಸಿದರು.
ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕರಾದ ಸುಜಾತ ಬಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜ್ ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಯ ಸಹಾಯಕ ನಿರ್ದೇಶಕರಾದ ನಾಗರತ್ನಮ್ಮ, ನಾಗೇಂದ್ರ ಪ್ರಸಾದ್ ಎ ಬಿ,ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲರಾದ ಡಾ. ನಟರಾಜ್ ಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಂ. ಸಿ ಶಿವಕುಮಾರ್ ವಂದನಾರ್ಪಣೆ ನೆರವೇರಿಸಿದರು.
ಮೈಸೂರು ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿ, ಭಾಗವಹಿಸಿದ್ದ ಸುಮಾರು 250 ಅಧ್ಯಾಪಕರಿಗೆ ಇದೇ ಸಂದರ್ಭದಲ್ಲಿ ಪ್ರಮಾಣಪತ್ರ ವಿತರಿಸಲಾಯಿತು.
ಜಂಟಿ ನಿರ್ದೇಶಕರಾದ ಪ್ರತಿಮಾ ಡಿ. ಎಸ್, ಪ್ರಾಂಶುಪಾಲರಾದ ಅಬ್ದುಲ್ ರಹಿಮಾನ್ ಎಂ, ಬೆಟ್ಟೇಗೌಡ, ನಟರಾಜ್, ಎಸ್. ಎಸ್. ಮಾಲಿನಿ, ಸಹಾಯಕ ನಿರ್ದೇಶಕರಾದ ಎ. ಬಿ. ನಾಗೇಂದ್ರ ಪ್ರಸಾದ್, ನಾಗರತ್ನಮ್ಮ ಹಾಜರಿದ್ದರು.
