ಮೈಸೂರು: ಯುವಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಭವಿಷ್ಯ ಕಾಪಾಡುವ ದೃಷ್ಟಿಯಿಂದ ಆನ್ ಲೈನ್ ಬೆಟ್ಟಿಂಗ್ ಆ್ಯಪ್ಗಳನ್ನು ನಿಷೇಧಿಸುವಂತೆ ಯುವಭಾರತ್ ಸಂಘಟನೆ ಮತ್ತು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಪೋಲಿಸ್ ಆಯುಕ್ತರಾದ ಸೀಮಾ ಲಾಟ್ಕರ್ ರ್ ಮತ್ತು ಸಿದ್ಧಾರ್ಥನಗರದಲ್ಲಿರುವ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಗೆ ಯುವಭಾರತ್ ಸಂಘಟನೆ ಮತ್ತು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಪದಾಧಿಕಾರಿಗಳು ತೆರಳಿ ಮನವಿ ಪತ್ರ ಸಲ್ಲಿಸಿದರು.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೊ ಗೇಮ್ ಹಾಗೂ ಬೆಟ್ಟಿಂಗ್ ಆ್ಯಪ್ಗಳು ಜಾಹೀರಾತುಗಳ ಮೂಲಕ ಯುವಕರನ್ನು ಸುಲಭವಾಗಿ ಆಕರ್ಷಿಸುತ್ತಿದ್ದು, ಈ ಆ್ಯಪ್ಗಳ ಪರಿಣಾಮ ಯುವಕರು ಕ್ಷಣಿಕ ಮೋಜುಮಸ್ತಿ ಹಣದ ಲಾಲಸೆಗೆ ಒಳಗಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ, ಕೆಲವರು ಆತ್ಮಹತ್ಯೆಯಿಂದ ಜೀವ ಕಳೆದುಕೊಂಡು ಹಲವಾರು ಕುಟುಂಬಗಳು ಶೋಚನೀಯ ಪರಿಸ್ಥಿತಿಯಲ್ಲಿವೆ ಎಂದು ಹೇಳಿದ್ದಾರೆ.
ಬಡ ಹಾಗೂ ಮಧ್ಯಮ ವರ್ಗದ ಜನತೆ ಆನ್ ಲೈನ್ ಬೆಟ್ಟಿಂಗ್ನಿಂದ ಆರ್ಥಿಕವಾಗಿ ಹಾನಿಗೊಳಗಾಗುತ್ತಿದ್ದಾರೆ. ಅಪರಾಧ ಚಟುವಟಿಕೆಗಳಿಗೂ ಆಸ್ಪದ ಮಾಡಿದಂತಾಗಿದೆ. ಜತೆಗೆ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟು ಮಾಡುತ್ತಿದೆ.
ಕೆಲವೇ ದಿನಗಳಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳು ಈಗಾಗಲೇ ಮಾನಸಿಕ ಒತ್ತಡದಲ್ಲಿದ್ದಾರೆ. ಇಂತಹ ಸಮಯದಲ್ಲಿ ಬೆಟ್ಟಿಂಗ್ ಆ್ಯಪ್ಗಳ ಹಾವಳಿಯಿಂದ ಮತ್ತಷ್ಟು ತೊಂದರೆಗೆ ಸಿಲುಕಲಿದ್ದಾರೆ, ಅವರ ಶಿಕ್ಷಣ ಹಾಗೂ ಭವಿಷ್ಯಕ್ಕೂ ಮಾರಕವಾಗಲಿದೆ. ಹೀಗಾಗಿ ಇಂತಹ ಬೆಟ್ಟಿಂಗ್ ಆ್ಯಪ್ಗಳನ್ನು ಕೂಡಲೇ ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಒತ್ತಾಯಿಸಿತು.
ಯುವ ಭಾರತ್ ಸಂಘಟನೆಯ ಸಂಚಾಲಕ ಜೋಗಿಮಂಜು, ಅಖಿಲ ಭಾರತ ಗ್ರಾಹಕ ಪಂಚಾಯತ್ ಸದಸ್ಯ ವಿಕ್ರಮ್ ಅಯ್ಯಂಗಾರ್, ಯುವಮೊರ್ಚಾ ಅಧ್ಯಕ್ಷ ರಾಕೇಶ್ ಗೌಡ,ನಿರೂಪಕ ಅಜಯ್ ಶಾಸ್ತ್ರಿ, ಆನಂದ್, ಮಹೇಶ್, ಮಹದೇವ್,ರಾಜೇಶ್ ಮತ್ತಿತರರು ಹಾಜರಿದ್ದರು.
