ಮೈಸೂರು: ಸಾರ್ವಜನಿಕ ಸ್ಥಳದಲ್ಲಿ ಬೀದಿನಾಯಿಗಳಿಗೆ ಆಹಾರ ನೀಡುವುದನ್ನು ನಿಷೇಧಿಸಿ ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿದೆ,ಆದರೆ ಮೈಸೂರಿನ ಮಹಿಳೆ ನಿಯಮ ಉಲ್ಲಂಘಿಸಿ ಪಾದಚಾರಿ ಮಾರ್ಗದಲ್ಲೇ ನಾಯಿಗಳಿಗೆ ಮಾಂಸ ಹಾಕಕರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ನಗರದ ಯುವರಾಜ ಕಾಲೇಜು ಪ್ರವೇಶ ದ್ವಾರದ ಬಳಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬರು ಸಾರ್ವಜನಿಕರು ಓಡಾಡುವ ಫುಟ್ಪಾತ್ನಲ್ಲೇ ನಾಯಿಗಳಿಗೆ ಮಾಂಸ ಹಾಕಿ ಹೋಗುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು,ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೀದಿನಾಯಿಗಳ ಹಾವಳಿ ತಡೆದು ಸಾರ್ವಜನಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗ, ಪಾರ್ಕ್, ಶಾಲಾ-ಕಾಲೇಜು ಆವರಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳಿಗೆ ಆಹಾರ ನೀಡುವುದನ್ನು ನಿಷೇಧಿಸಿ ಉಚ್ಚ ನ್ಯಾಯಾಲಯ ಈ ಹಿಂದೆ ಸ್ಪಷ್ಟ ಆದೇಶ ನೀಡಿತ್ತು.
ಯುವರಾಜ ಕಾಲೇಜು ರಸ್ತೆಯಲ್ಲಿ ಪ್ರತಿದಿನ ನೂರಾರು ವಿದ್ಯಾರ್ಥಿಗಳು, ಪೋಷಕರು,ಇತರೆ ಜನ ಓಡಾಡುತ್ತಾರೆ. ಇಲ್ಲೇ ಆಹಾರ ಹಾಕಿದರೆ ನಾಯಿಗಳು ಶಾಶ್ವತವಾಗಿ ಬೀಡುಬಿಡುತ್ತವೆ. ನಾಯಿ ಕಡಿತ, ಬೈಕ್ ಸವಾರರಿಗೆ ಅಡ್ಡಬರುವ ಪ್ರಕರಣಗಳು ಹೆಚ್ಚುತ್ತವೆ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಸಾರ್ವಜನಿಕ ಸ್ಥಳದಲ್ಲಿ ನಾಯಿಗಳಿಗೆ ಆಹಾರ ನೀಡುವುದು ಕಾನೂನುಬಾಹಿರ. ಸ್ಥಳ ಪರಿಶೀಲಿಸಿ ಸಂಬಂಧಪಟ್ಟ ಮಹಿಳೆಗೆ ನೋಟಿಸ್ ಜಾರಿ ಮಾಡುತ್ತೇವೆ. ಮತ್ತೆ ಪುನರಾವರ್ತನೆಯಾದರೆ ನಿಯಮಾನುಸಾರ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಾಣಿಪ್ರಿಯರು ನಿಗದಿತ ಫೀಡಿಂಗ್ ಪಾಯಿಂಟ್ಗಳಲ್ಲೇ ನಾಯಿಗಳಿಗೆ ಆಹಾರ ನೀಡಬೇಕು. ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಪಾಲಿಕೆ ಸೂಚಿಸಿದೆ.
