ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ನೂತನ ಸಂಪುಟದಲ್ಲಿ ಮಹಿಳೆಯರನ್ನು ಸಂಪೂರ್ಣ ಕಡೆಗಣಿಸುವ ಮೂಲಕ ನಾರಿ ಶಕ್ತಿಗೆ ಅವಮಾನ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಮಂಡಳಿಯ ಮಾಜಿ ನಿರ್ದೇಶಕಿ ರೇಣುಕಾ ರಾಜ್ ವಾಗ್ದಾಳಿ ನಡೆಸಿದ್ದಾರೆ.
ಮಹಿಳಾ ಸಬಲೀಕರಣದ ಭಾಷಣ ಮಾಡುವ ಕಾಂಗ್ರೆಸ್ಸಿಗರು ಇಂದಿರಾ ಸೋನಿಯಾ ಮತ್ತು ಪ್ರಿಯಾಂಕ ಮಾತ್ರ ಮಹಿಳೆಯರು , ಉಳಿದ ಮಹಿಳೆಯರನ್ನು ಕೇವಲ ಗ್ಯಾರಂಟಿ ಗಳಿಗೆ ವೋಟ್ ಹಾಕುವ ಯಂತ್ರಗಳಂತೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಚುನಾವಣೆ ಮೇಲೆ ಮಹಿಳೆಯರ ಮತ ಬೇಕು, ಆದರೆ ಅವರಿಗೆ ಅಧಿಕಾರ ನೀಡಲು ಮನಸ್ಸಿಲ್ಲವೇ ಎಂದು ಪ್ರಶ್ನಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿ ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಶೇಕಡ 33ರ ಮೀಸಲಾತಿಗೆ ಐತಿಹಾಸಿಕ ನಾರಿ ಶಕ್ತಿ ವಂದನಾ ಅಧಿನಿಯಮ ತರಲು ಮುಂದಾದಾಗ ವಿರೋಧಿಸಿದ ಕಾಂಗ್ರೆಸ್, ಇಂದು ಕರ್ನಾಟಕದಲ್ಲಿ ಸಹ ಮಹಿಳಾ ನಾಯಕತ್ವಕ್ಕೆ ಬ್ರೇಕ್ ಹಾಕಿದೆ,
ಸರ್ಕಾರದ ಈ ಧೋರಣೆ ಖಂಡನೀಯ ಎಂದು ಹೇಳಿದ್ದಾರೆ.
ಅರ್ಹ ಮಹಿಳಾ ಜನಪ್ರತಿನಿಧಿಗಳಿಗೆ ಅವಕಾಶ ನಿರಾಕರಿಸಿರುವುದು ತಾರತಮ್ಯದ ನೀತಿಯಾಗಿದೆ, ಸರ್ಕಾರ ತಕ್ಷಣವೇ ಈ ತಪ್ಪನ್ನು ಸರಿಪಡಿಸಿ, ಮಹಿಳೆಯರಿಗೆ ಅರ್ಹ ಸ್ಥಾನಮಾನ ನೀಡಬೇಕು ಎಂದು ರೇಣುಕಾ ರಾಜ್ ಒತ್ತಾಯಿಸಿದ್ದಾರೆ.
