ಮೈಸೂರು: ತಾಯಿಯ ನಡತೆ ಬಗ್ಗೆ ಅನುಮಾನಗೊಂಡು ಹೆತ್ತಮ್ಮನನ್ನೇ ಪುತ್ರ ಬಡಿಗೆಯಿಂದ ಹೊಡೆದು ಕೊಲೆ ಮಾಡಿರುವ ಅತ್ಯಂತ ಹೇಯ ಘಟನೆ ಮೈಸೂರು ತಾಲೂಕಿನಲ್ಲಿ ನಡೆದಿದೆ.
ಪಾಪಿ ಮಗ ಹೆತ್ತವ್ವನ ಕೊಂದು ತಂದೆ ಹಾಗೂ ಇಬ್ಬರು ಸಂಬಂಧಿಕರ ನೆರವಿನಲ್ಲಿ ಮಾವಿನ ತೋಪಿನಲ್ಲಿ ಶವ ಸುಟ್ಟು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಘಟನೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಾದನಹಳ್ಳಿಯಲ್ಲಿ ನಡೆದಿದೆ.
ಸುಧಾ (48) ಮಗನಿಂದ ಕೊಲೆಯಾದ ದುರ್ದೈವಿ ತಾಯಿ. ಮಗ ಶಿವರುದ್ರಪ್ಪ ಎಸ್. (30), ಸಾಕ್ಷ್ಯ ನಾಶಕ್ಕೆ ಸಹಕರಿಸಿದ ತಂದೆ ನಂಜುಂಡಯ್ಯ, ಚಿಕ್ಕಪ್ಪನ ಮಕ್ಕಳಾದ ಆಕಾಶ್ (24) ಹಾಗೂ ಅಭಿ (22) ಅವರನ್ನು ಜಯಪುರ ಪೊಲೀಸರು ಬಂಧಿಸಿದ್ದಾರೆ.
ಸುಮಾರು ಮೂರು ತಿಂಗಳ ಹಿಂದೆ
ಸುಧಾ ಅವರು ಯಾವುದೊ ವ್ಯಕ್ತಿಯೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದ ವಿಡಿಯೋವನ್ನು ಯಾರೋ ಚಿತ್ರೀಕರಿಸಿ ಮಗ ಶಿವರುದ್ರಪ್ಪನ ಮೊಬೈಲ್ಗೆ ಕಳುಹಿಸಿದ್ದರು.
ಅಂದಿನಿಂದ ತಾಯಿ-ಮಗನ ನಡುವೆ ಪದೇಪದೆ ವಾಗ್ವಾದ ನಡೆಯುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಭಾನುವಾರ ಮಧ್ಯಾಹ್ನ ಇದೇ ವಿಚಾರಕ್ಕೆ ಮನೆಯಲ್ಲಿ ಮತ್ತೆ ಜಗಳ ತೀವ್ರಗೊಂಡಿದೆ. ಕೋಪಗೊಂಡ ಶಿವರುದ್ರಪ್ಪ ದೊಣ್ಣೆಯಿಂದ ತಾಯಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸುಧಾ ಮೃತಪಟ್ಟಿದ್ದಾರೆ.
ಶವವನ್ನು ಗ್ರಾಮಕ್ಕೆ ತಂದರೆ ಎಲ್ಲರಿಗೂ ವಿಷಯ ಗೊತ್ತಾಗುತ್ತದೆ ಎಂದು ಭಾವಿಸಿ, ನಾಲ್ವರು ಸೇರಿ ಗ್ರಾಮದ ಹೊರವಲಯದ ಮಾವಿನ ತೋಪಿಗೆ ಮೃತದೇಹ ತಂದು ಸೌದೆ ಹಾಕಿ ಸುಡಲು ಆರಂಭಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಭಾನುವಾರ ಮಧ್ಯಾಹ್ನ ತಾಯಿಯನ್ನು ಮಗನೇ ಕೊಂದು ಸುಟ್ಟುಹಾಕಿದ್ದಾರೆ’ ಎಂದು ಅಪರಿಚಿತರಿಂದ ಕರೆ ಬಂದಿದೆ. ಕೂಡಲೇ ಜಯಪುರ ಪಿಎಸ್ಐ ಸ್ಥಳಕ್ಕೆ ಧಾವಿಸಿದರು. ಆರಂಭದಲ್ಲಿ ಗ್ರಾಮಸ್ಥರು ಏನನ್ನು ಹೇಳಲಿಲ್ಲ, ಆದರೆ ಮನೆಯಲ್ಲಿ ರಕ್ತದ ಕಲೆ, ರಕ್ತ ಮೆತ್ತಿದ ದೊಣ್ಣೆ ಸಿಕ್ಕಾಗ ಪ್ರಕರಣ ಖಚಿತವಾಗಿದೆ.
ಮಾವಿನ ತೋಪಿನಲ್ಲಿ ಪರಿಶೀಲಿಸಿದಾಗ ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ ತಕ್ಷಣ ಬೆಂಕಿ ಆರಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ಶಿವರುದ್ರಪ್ಪ ತಾಯಿಯ ವರ್ತನೆಯಿಂದ ಸಿಟ್ಟಿಗೆದ್ದು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಸಿಪಿಐ ಜಯಪ್ರಕಾಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
