ಮೈಸೂರು: ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ತಮ್ಮ ಹಕ್ಕುಗಳು ಮತ್ತು ಅಗತ್ಯಗಳಿಗಾಗಿ ಪ್ರತಿ ದಿನ ಅಲೆಯುವ ಪರಿಸ್ಥಿತಿಗೆ ಅಂತ್ಯ ಹಾಡಬೇಕು
ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್, ಮೈಸೂರು ಘಟಕದ ಉಪಾಧ್ಯಕ್ಷ ವಿಕ್ರಂ ಅಯ್ಯಂಗಾರ್ ಆಗ್ರಹಿಸಿದ್ದಾರೆ,
ಕಚೇರಿ ಗಳಲ್ಲಿ ಕಡತಗಳನ್ನು ನಿಗದಿತ ಸಮಯದೊಳಗೆ ಇತ್ಯರ್ಥ್ಯ ಪಡಿಸಲು ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು
ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಸರ್ಕಾರಿ ಕಚೇರಿಗೆ ಬರುವ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಹಿಂದೆ ಅವರ ದೈನಂದಿನ ಜೀವನದ ಕಷ್ಟಗಳು, ಕಣ್ಣೀರು ಮತ್ತು ನಿರೀಕ್ಷೆಗಳುರುತ್ತವೆ ಒಂದು ಸಣ್ಣ ಕೆಲಸಕ್ಕಾಗಿ ಅಥವಾ ಕಡತದ ಸಹಿಗಾಗಿ ಸಾಮಾನ್ಯ ಜನರನ್ನು, ಹಿರಿಯ ನಾಗರಿಕರನ್ನು, ಮತ್ತು ಕಾರ್ಮಿಕರನ್ನು ದಿನಗಟ್ಟಲೆ ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವುದು ಅತ್ಯಂತ ಬೇಸರದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ನಗರ ಪಾಲಿಕೆ, ಗ್ರಾಮ ಪಂಚಾಯಿತಿ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ, ಅಲ್ಲಿಗೆ ತಲುಪುವ ಪ್ರತಿ ಕಡತ ಅಥವಾ ದೂರುಗಳು ನಿಗದಿತ ಕಾಲಮಿತಿಯೊಳಗೆ ಶೀಘ್ರವಾಗಿ ಇತ್ಯರ್ಥವಾಗಬೇಕು ಎಂದು ಒತ್ತಾಯಿಸಿದ್ದಾರೆ,
ಸೇವೆಗಳು ವಿಳಂಬವಾಗಲು ಪ್ರಮುಖ ಕಾರಣವಾಗಿರುವ ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಸರ್ಕಾರವು ತಕ್ಷಣ ಮುಂದಾಗಬೇಕು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಗೆ ಸರ್ಕಾರಿ ನೌಕರರು ದಕ್ಷತೆಯಿಂದ ಕೆಲಸ ಮಾಡಲು ಅಗತ್ಯವಿರುವ ಸೂಕ್ತ ವಾತಾವರಣ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ವಿಕ್ರಮ್ ಅಯ್ಯಂಗಾರ್ ಒತ್ತಾಯಿಸಿದ್ದಾರೆ.
