ಬೆಂಗಳೂರು: ರಾಜ್ಯದಲ್ಲಿನ 1 ಲಕ್ಷಕ್ಕೂ ಅಧಿಕ ಸಾರಿಗೆ ನೌಕರರ 2024 ರಿಂದ ವೇತನ ಪರಿಷ್ಕರಣೆ ಹಾಗೂ ಮೂಲ ವೇತನವನ್ನು ಶೇ.25 ರಷ್ಟು ಹೆಚ್ಚಿಸಬೇಕೆಂಬ ನ್ಯಾಯಯುತ ಬೇಡಿಕೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ
ಸಾರಿಗೆ ನೌಕರರ ಬೇಡಿಕೆ ಈಡೇರಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮುಷ್ಕರದಿಂದ ಜನಸಾಮಾನ್ಯರಿಗಾಗುವ ಕಷ್ಟನಷ್ಟಗಳನ್ನು ತಪ್ಪಿಸಬೇಕು ಎಂದು ಆಪ್ ಒತ್ತಾಯಿಸಿದೆ.
ಈ ಬಗ್ಗೆ ಮಾತನಾಡಿದ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ, ರಾಜ್ಯದಲ್ಲಿ ಸಾರಿಗೆ ನೌಕರರು ಪ್ರತಿ ದಿನ ಕೋಟ್ಯಾಂತರ ಪ್ರಯಾಣಿಕರ ಜೀವವನ್ನು ಸುರಕ್ಷತೆಯಿಂದ ಕಾಪಾಡುವಂತಹ ಮಹತ್ವದ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಬೇಡಿಕೆ ಇನ್ನೂ ಈಡೇರಿಲ್ಲ.ಅವರನ್ನು ಎಲ್ಲ ಸರ್ಕಾರಗಳು ಜೀತದಾಳು ಪದ್ಧತಿಯಲ್ಲಿ ನಡೆಸಿಕೊಂಡು ಬರುತ್ತಿರುವುದು ದುರದೃಷ್ಟಕರ ಸಂಗತಿ ಎಂದು ತಿಳಿಸಿದ್ದಾರೆ.
ಅವರಿಗೆ ನೀಡುತ್ತಿರುವ ಬಿಡಿಗಾಸಿನ ಸಂಬಳ ನಿಜಕ್ಕೂ ಸಂವಿಧಾನದ ಮೂಲಭೂತ ಹಕ್ಕುಗಳ ಆಶಯಕ್ಕೆ ವಿರುದ್ಧವಾಗಿದೆ. ಪಂಜಾಬ್, ದೆಹಲಿ ರಾಜ್ಯಗಳಲ್ಲಿ ಈಗಾಗಲೇ ಆಮ್ ಆದ್ಮಿ ಪಕ್ಷದ ಸರ್ಕಾರ ಸಾರಿಗೆ ನೌಕರರಿಗೆ ಸಿಗಬೇಕಾದ ಎಲ್ಲ ಸವಲತ್ತುಗಳನ್ನು ಜಾರಿಗೊಳಿಸಿದ್ದೇವೆ.ಆದರೆ ನಮ್ಮ ರಾಜ್ಯದಲ್ಲಿ ಯಾಕೆ ಇದು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಕೂಡಲೇ ಮುಖ್ಯಮಂತ್ರಿಗಳು ಸಾರಿಗೆ ನೌಕರರ ಸಂಘಟನೆಗಳೊಂದಿಗೆ ನೇರವಾಗಿ ಚರ್ಚಿಸಬೇಕು. ಅವರ ಬಹು ವರ್ಷಗಳ ಬೇಡಿಕೆಯನ್ನು ಯಾವುದೇ ಚೌಕಾಸಿ ಇಲ್ಲದೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಕಳೆದ ಬಾರಿ ಮುಷ್ಕರದಲ್ಲಿ ಸಾವಿರಾರು ನೌಕರರ ಮೇಲೆ ಎಸ್ಮಾ ಕಾಯ್ದೆ ಜಾರಿಗೊಳಿಸಿ ಅವರ ಬದುಕನ್ನೇ ಮೂರಾಬಟ್ಟೆ ಮಾಡಿದ್ದಾರೆ. ಈಗ ಈ ರೀತಿಯ ಅಸ್ತ್ರ ಪ್ರಯೋಗವನ್ನು ಮಾಡದೆ ಬಡ ನೌಕರರು ಹಾಗೂ ಅವರನ್ನು ನಂಬಿಕೊಂಡಿರುವ ಅವರ ಕುಟುಂಬಗಳಿಗೆ ಸರ್ಕಾರ ಆಸರೆಯಾಗಬೇಕು ಎಂದು ಸಲಹೆ ನೀಡಿದ್ದಾರೆ.
ಇಂತಹ ಮುಷ್ಕರದ ಸಂದರ್ಭಗಳಲ್ಲಿ ಖಾಸಗಿ ಚಾಲಕರನ್ನು ನೇಮಿಸಿಕೊಂಡು ಲಕ್ಷಾಂತರ ಪ್ರಯಾಣಿಕರ ಜೀವಕ್ಕೆ ಸಂಚಕಾರ ಉಂಟು ಮಾಡುವುದು ಸರಿಯಲ್ಲ. ಬಹು ವರ್ಷಗಳ ರಾಜಿ ಸಂಧಾನಗಳನ್ನು ಕೇವಲ ಕಾರ್ಮಿಕ ಆಯುಕ್ತರ ಜವಾಬ್ದಾರಿಗೆ ವಹಿಸಿ ಕೈ ತೊಳೆದುಕೊಳ್ಳುವ ಕೆಟ್ಟ ಪರಿಯನ್ನು ಬಿಡಬೇಕು. ಮುಖ್ಯಮಂತ್ರಿಗಳು ಕೂಡಲೇ ಮಧ್ಯಪ್ರವೇಶಿಸಿ ಜನಸಾಮಾನ್ಯರಿಗೆ ಮುಷ್ಕರದಿಂದಾಗುವ ಕಷ್ಟ ನಷ್ಟಗಳನ್ನು ತಪ್ಪಿಸಬೇಕು ಎಂದು ಜಗದೀಶ್ ವಿ.ಸದಂ ಆಗ್ರಹಿಸಿದ್ದಾರೆ.
