ವೆನಿಜುವೆಲಾ: ಡ್ರಗ್ಸ್ ಮಾಫಿಯಾ ಆರೋಪದ ಮೇಲೆ ದಾಳಿ ನಡೆಸಿ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಬಂಧಿಸಿದ್ದೇನೋ ಆಯಿತು.
ಇದೀಗ ಅದೇ ಅಮೆರಿಕಾ ಗೆ ವೆನಿಜುವೆಲಾದ ಹಂಗಾಮಿ ಅಧ್ಯಕ್ಷರಾಗಿ ಹಾಲಿ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಿ ಶಾಕ್ ನೀಡಲಾಗಿದೆ.
ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವಂತೆ ವೆನಿಜುವೆಲಾದ ಸುಪ್ರೀಂ ಕೋರ್ಟ್ ಡೆಲ್ಸಿ ರೊಡ್ರಿಗಸ್ ಅವರಿಗೆ ಭಾನುವಾರ ನಿರ್ದೇಶಿಸಿದೆ.
ದೇಶದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಮತ್ತು ಆಡಳಿತಾತ್ಮಕ ಕಾರ್ಯಗಳು ಮುಂದುವರಿಯಬೇಕಾದ ಕಾರಣ, ಅಧ್ಯಕ್ಷರ ಗೈರು ಹಾಜರಿಯಲ್ಲಿ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರು ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ.
ದೇಶದ ಸಂವಿಧಾನದ ಪ್ರಕಾರ, ಅಧ್ಯಕ್ಷರು ಇಲ್ಲದಾಗ ದೇಶವನ್ನು ಮುನ್ನಡೆಸುವ ಅಧಿಕಾರ ಉಪಾಧ್ಯಕ್ಷರಿಗೆ ಸಿಗಲಿದೆ. ರಾಷ್ಟ್ರದ ಸಮಗ್ರತೆ ಕಾಪಾಡುವ ಮತ್ತು ಆಡಳಿತವು ಸುಗಮವಾಗಿ ನಡೆಯಲು ಡೆಲ್ಸಿ ಅವರು ಹಂಗಾಮಿ ಅಧ್ಯಕ್ಷರಾಗಲಿದ್ದಾರೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ವೆನಿಜುವೆಲಾದ ಮೇಲೆ ಶನಿವಾರ ಬಾಂಬ್ ದಾಳಿ ನಡೆಸಿ, ನಿಕೊಲಸ್ ಮಡುರೊ ಅವರನ್ನು ಅಮೆರಿಕದ ಸೇನೆ ಬಂಧಿಸಿ, ಕರೆದೊಯ್ದಿದೆ.
ಆ ಬಳಿಕ ಮಾತನಾಡಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದಕ್ಷಿಣ ಅಮೆರಿಕದ ದೇಶವನ್ನು ತಾತ್ಕಾಲಿಕವಾಗಿ ಅಮೆರಿಕದ ನಿಯಂತ್ರಣಕ್ಕೆ ಒಳಪಟ್ಟಿರಲಿದೆ ಎಂದು ಘೋಷಿಸಿದ್ದರು. ಆದರೆ, ಇದಕ್ಕೆ ವಿರುದ್ಧವಾಗಿ ವೆನಿಜುವೆಲಾ ಸುಪ್ರೀಂಕೋರ್ಟ್ ರೋಡ್ರಿಗಸ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ.
ನೊಬೆಲ್ ಶಾಂತಿ ಪುರಸ್ಕೃತೆಗೆ ತಪ್ಪಿದ ಅಧಿಕಾರ: ವೆನಿಜುವೆಲಾದ ವಿರೋಧ ಪಕ್ಷದ ನಾಯಕಿ, ನೊಬೆಲ್ ಶಾಂತಿ ಪುರಸ್ಕೃತೆ ಮಾರಿಯಾ ಕೊರಿನಾ ಮಚಾಡೊ ಅವರು ನಿಕೋಲಸ್ ಮಡುರೊ ಬಂಧನದ ಬಳಿಕ ದೇಶದ ಅಧಿಕಾರ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದರು. ಆದರೆ, ಈ ಅವಕಾಶ ಕೈತಪ್ಪಿದೆ. ಡೊನಾಲ್ಡ್ ಟ್ರಂಪ್ ಕೂಡ ಅವರಿಗೆ ಅಧಿಕಾರ ನೀಡಲು ನಿರಾಕರಿಸಿದ್ದರು.
ದೇಶಕ್ಕಾಗಿ ಅವರು ಹೋರಾಟ ನಡೆಸಿದ್ದಾರೆ. ಉತ್ತಮ ಮಹಿಳೆಯೂ ಹೌದು. ಆದರೆ, ಅವರಿಗೆ ದೇಶದಲ್ಲೇ ಬೆಂಬಲ, ಗೌರವವಿಲ್ಲ. ಹೀಗಾಗಿ ಆಕೆಗೆ ಅಧಿಕಾರ ನೀಡಲು ಸಾಧ್ಯವಿಲ್ಲ. ವೆನಿಜುವೆಲಾವನ್ನು ಅಮೆರಿಕದ ಸುಪರ್ದಿಯಲ್ಲೇ ಇಟ್ಟುಕೊಳ್ಳುವುದಾಗಿ ಟ್ರಂಪ್ ಹೇಳಿದ್ದರು.
