ಮೈಸೂರು: ಭೂಮಿಯನ್ನು ಕಾಪಾಡೋಣ ನಮ್ಮ ಭವಿಷ್ಯವನ್ನು ಉಳಿಸೋಣ ಎಂಬ ಘೋಷಣೆಯನ್ನು ಎಲ್ಲರೂ ಪಾಲಿಸಬೇಕು ಎಂದು ಡಾ.ನಯೀಮುಲ್ಲಾ ಷರೀಫ್ ಕರೆ ನೀಡಿದರು.
ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ 317 ಜಿ ,ಅಂಬಾಸಿಡರಸ್ ಲಯನ್ ಸಂಸ್ಥೆ ಹಾಗೂ ಪರಿವರ್ತನ ಬಿಸಿನೆಸ್ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಭೂಮಿ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು,ಮಾನವ ಮತ್ತು ಪ್ರಕೃತಿ ನಡುವೆ ಅವಿನಾಭಾವ ಸಂಬಂಧವಿದೆ, ಆದರೆ ಇಂದಿನ ಜೀವನ ಶೈಲಿ ಪ್ರಕೃತಿಯ ಸಮತೋಲನವನ್ನು ಹಾಳು ಮಾಡುತ್ತಿದೆ ಎಂದು ಎಚ್ಚರಿಸಿದರು.
ಅರಣ್ಯ ನಾಶ, ಜೀವ ವೈವಿಧ್ಯ ಕುಗ್ಗುವಿಕೆ, ಕಾರ್ಬನ್ ಉತ್ಸರ್ಗದ ಹೆಚ್ಚಳ ಇವುಗಳು ಭೂಮಿಯ ಆರೋಗ್ಯಕ್ಕೆ ದೊಡ್ಡ ಸವಾಲುಗಳಾಗಿವೆ. ಇವುಗಳನ್ನು ನಿಯಂತ್ರಿಸಲು ಪುನರುತ್ಪಾದನೀಯ ಶಕ್ತಿ ಬಳಕೆ, ಪರಿಸರ ಸ್ನೇಹಿ ಕೃಷಿ ವಿಧಾನಗಳು ಮತ್ತು ಜವಾಬ್ದಾರಿಯುತ ಬಳಕೆ ಅಗತ್ಯವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕೇವಲ ಶಿಕ್ಷಣದಲ್ಲೇ ಸೀಮಿತವಾಗದೆ, ಪರಿಸರ ಸಂರಕ್ಷಣೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಹಸಿರು ಭೂಮಿ- ಆರೋಗ್ಯಕರ ಜೀವನ ಎಂಬ ಸಂದೇಶವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ನಯೀಮುಲ್ಲಾ ಷರೀಫ್ ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲಯನ್ ಜಿಲ್ಲಾ ಅಧ್ಯಕ್ಷ ( ಪರಿಸರ) ಲಯನ್ ಮಕಾಳ ಶಿವಕುಮಾರ್ ಅವರು ಭೂಮಿ ನಮ್ಮ ಬದುಕಿನ ಮೂಲಾಧಾರವಾಗಿದೆ ಎಂದು ಹೇಳಿದರು.
ನಾವು ಬಳಸುವ ಪ್ರತಿಯೊಂದು ಸಂಪನ್ಮೂಲವೂ ಪ್ರಕೃತಿಯಿಂದಲೇ ದೊರೆಯುತ್ತದೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಪರಿಸರದ ಮೇಲೆ ಮಾನವನು ಮಾಡುತ್ತಿರುವ ಹಾನಿ ಚಿಂತಾಜನಕವಾಗಿದೆ ಎಂದು ವಿಷಾದಿಸಿದರು.
ವಿದ್ಯಾರ್ಥಿಗಳು ಮತ್ತು ಯುವಕರು ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಬೇಕು, ಮರ ನೆಡುವುದು, ನೀರಿನ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಇತ್ಯಾದಿ ಕ್ರಮಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಹೇಳಿದರು.
ಭೂಮಿಯನ್ನು ಉಳಿಸುವುದು ನಮ್ಮ ಕರ್ತವ್ಯ ಮಾತ್ರವಲ್ಲ, ಅದು ನಮ್ಮ ಭವಿಷ್ಯವನ್ನು ಉಳಿಸುವ ಹಾದಿಯಾಗಿದೆ ಎಂಬ ಅರಿವು ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಮಾಕಾಳ ಶಿವಕುಮಾರ್ ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಲಯನ್ ಸಿ.ಆರ್. ದಿನೇಶ್ ಅವರು ವಿಶ್ವ ಭೂಮಿ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು,ಪರಿಸರ ಸಂರಕ್ಷಣೆ ನಮ್ಮ ದೈನಂದಿನ ಜೀವನದ ಭಾಗವಾಗಬೇಕು ಎಂದು ಸಲಹೆ ನೀಡಿದರು.
ಇಂದಿನ ಪರಿಸರ ಸಮಸ್ಯೆಗಳು ಹವಾಮಾನ ಬದಲಾವಣೆ, ನೀರಿನ ಕೊರತೆ, ವಾಯು ಮಾಲಿನ್ಯ ಇವೆಲ್ಲವೂ ಮಾನವನ ಅಜಾಗರೂಕತೆಯ ಪರಿಣಾಮಗಳಾಗಿವೆ. ಇದನ್ನು ತಡೆಗಟ್ಟಲು ಪ್ರತಿಯೊಬ್ಬರೂ ತಮ್ಮ ಮಟ್ಟದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಲಯನ್ಸ್ ಸಂಸ್ಥೆ ಸದಾ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದು, ಪರಿಸರ ಸಂರಕ್ಷಣೆಯಲ್ಲೂ ಮಹತ್ವದ ಪಾತ್ರ ವಹಿಸುತ್ತಿದೆ. ವಿದ್ಯಾರ್ಥಿಗಳು ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಸಿ.ಆರ್.ದಿನೇಶ್ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪರಿವರ್ತನಾ ಶಾಲೆಯ ಮ್ಯಾನೆಜಿಂಗ್ ಡೈರೆಕ್ಟರ್ ಮಂಜುರಾಮ್,ಪುಟ್ಟೇಗೌಡ ,ಪ್ರಾಂಶುಪಾಲರಾದ ರಘುನಂದನ್, ಲಯನ್ಸ್ ಅಂಬಾಸಿಡರಸ್ ಸಂಸ್ಥೆಯ ಸದಸ್ಯರಾದ ಲಯನ್ ಶ್ರೀಧರ್ ,ಲಯನ್ ಪುಟ್ಟಸ್ವಾಮಿ, ಲಯನ್ ರವಿ, ಲಯನ್ ಮನು,ಲಿಯೊ ನೇಸರ್ ಪರಿವರ್ತನ ಬಿಸಿನೆಸ್ ಶಾಲೆಯ ಸಹಾಯಕ ಪ್ರಾಧ್ಯಾಪಕರಾದ ತೇಜಸ್ವಿನಿ ಸಿ.ಕೆ, ಸ್ವಾಗತ ಚಿತ್ರ ಎಂ.ಡಿ ,ಚೈತನ್ಯ ಅವರು ವಂದನೆ, ಕಾರ್ಯಕ್ರಮದ ನಿರೂಪಣೆಯನ್ನು ನಿಹಾರಿಕ ಜೋಶಿ ಅವರು ಮಾಡಿದರು.
ಕೊನೆಯಲ್ಲಿ ಭೂಮಿಯನ್ನು ಕಾಪಾಡೋಣ ನಮ್ಮ ಭವಿಷ್ಯವನ್ನು ಉಳಿಸೋಣ ಎಂಬ ಘೋಷಣೆಯೊಂದಿಗೆ ಎಲ್ಲರೂ ಪರಿಸರ ಸಂರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಂಡುದು ವಿಶೇಷ ವಾಗಿತ್ತು.
