ಬೆಂಗಳೂರು: ಪ್ರಧಾನಿಯನ್ನು ಟೆರರಿಸ್ಟ್ ಎಂದು ಕರೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಕ್ಷಣ ಕ್ಷಮೆ ಯಾಚಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
ಇವರು ಕಾಂಗ್ರೆಸ್ನ ಅಧ್ಯಕ್ಷ ಸ್ಥಾನದಲ್ಲಿರಲು ಸೂಕ್ತರಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್,ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿರಲು ಸೂಕ್ತರಲ್ಲ ಎಂದು ಹೇಳಿದರು.
ನರೇಂದ್ರ ಮೋದಿ ಅವರು ಅತಿ ಹೆಚ್ಚು ದಿನಗಳ ಕಾಲ ಪ್ರಧಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ದೇಶಪ್ರೇಮದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಎತ್ತಿ ಟೆರರಿಸ್ಟ್ ಎಂಬ ಪದಬಳಕೆ ಮಾಡಿದ್ದಾರೆ ಎಂದು ಟೀಕಿಸಿದರು.
ಹಿಂದೆ ಅವರನ್ನು ಚಾಯ್ವಾಲಾ ಎಂದು ಟೀಕೆ ಮಾಡಿದ್ದಾಗ ಅದನ್ನೇ ಅಭಿಯಾನ ಮಾಡಲಾಯಿತು. ಇವರ ಟೀಕೆಗಳೇ ಬಿಜೆಪಿಗೆ ವರವಾಗಿದೆ. ಜೀವನದಲ್ಲಿ ಇನ್ನೆಂದೂ ಅಧಿಕಾರ ಸಿಗಲ್ಲ ಎಂಬ ಆತಂಕದಿಂದ ಕಾಂಗ್ರೆಸ್ ನಾಯಕರು ಈ ರೀತಿ ಮಾತಾಡುತ್ತಿದ್ದಾರೆ. ಎದ್ದು ಓಡಾಡಲು ಸಾಧ್ಯವಾಗದ ನಿವೃತ್ತ ಸ್ಥಿತಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಅಶೋಕ ಒತ್ತಾಯಿಸಿದರು.
ಯಾರು ದೇಶದ್ರೋಹಿ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ರಾಜ್ಯದಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾದಾಗ ಅವರನ್ನು ಬ್ರದರ್ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಖರ್ಗೆಯವರ ಬಲಗೈ ಮುಖಂಡನ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಕೂಗಿದ್ದರು. ಅವರ ಬಗ್ಗೆಯಾಗಲೀ, ಕುಕ್ಕರ್ ಬಾಂಬ್ ಬಗ್ಗೆಯಾಗಲೀ, ಪಾಕಿಸ್ತಾನದ ಬಗ್ಗೆಯಾಗಲೀ ಖರ್ಗೆ ಪ್ರತಿಕ್ರಿಯೆ ನೀಡಿಲ್ಲ. ಸರ್ಜಿಕಲ್ ಸ್ಟ್ರೈಕ್ ಆದಾಗ ಇವರೆಲ್ಲರೂ ಯೋಧರ ಬಗ್ಗೆ ಟೀಕೆ ಮಾಡಿದ್ದರು. ಕೂಡಲೇ ಖರ್ಗೆಯವರು ದೇಶದ ಜನರ ಕ್ಷಮೆ ಯಾಚಿಸಬೇಕು. ಅವರ ಈ ಹೇಳಿಕೆ ವಿರುದ್ಧ ಗುರುವಾರ ವಿಧಾನಸೌಧದ ಮುಂಭಾಗ ಬೆಂಗಳೂರಿನ ಶಾಸಕರೊಂದಿಗೆ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.
ಕೇರಳ ಹಾಗೂ ತಮಿಳುನಾಡಲ್ಲಿ ಬಿಜೆಪಿಗೆ ಉತ್ತಮ ಬೆಂಬಲ ಸಿಗುತ್ತಿದೆ. ಕಾಂಗ್ರೆಸ್ಗೆ ಸೋಲುವ ಲಕ್ಷಣ ಕಾಣಿಸಿದೆ. ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲ್ಲಲಿದೆ. ಚುನಾವಣಾ ಪೂರ್ವ ಸಮೀಕ್ಷಾ ವರದಿಗಳಿಂದಾಗಿ ಕಾಂಗ್ರೆಸ್ ನಾಯಕರು ಭ್ರಮನಿರಸನಗೊಂಡಿದ್ದಾರೆ. ಸೋಲಿನ ವಿಷಯಾಂತರ ಮಾಡಲು ಪ್ರಧಾನಿ ಮೋದಿಯನ್ನು ನಿಂದಿಸುತ್ತಿದ್ದಾರೆ ಎಂದು ಟೀಕಿಸಿದರು.
ಜಾರಿ ನಿರ್ದೇಶನಾಲಯದಿಂದ ಶಾಸಕ ಎನ್.ಎ.ಹ್ಯಾರಿಸ್ ಕುಟುಂಬದ ಆಸ್ತಿಗಳ ಮೇಲೆ ದಾಳಿ ನಡೆದಿದೆ. ಬಿಟ್ಕಾಯಿನ್ ಹಗರಣದ ತನಿಖೆ ಆರಂಭವಾಗಿ ಮೂರು ವರ್ಷವಾದರೂ ಚಾರ್ಜ್ಶೀಟ್ ಸಲ್ಲಿಸಿಲ್ಲ. ಗೃಹಸಚಿವ ಡಾ.ಜಿ.ಪರಮೇಶ್ವರ್ ಈ ಬಗ್ಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಕ್ರಿಕೆಟ್ ಬೆಟ್ಟಿಂಗ್ನಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೊಳಗಾಗಿದ್ದು, ಅನೇಕ ಸಾವು ನೋವು ಉಂಟಾಗಿದೆ. ಯಾವುದೇ ಸಚಿವರು ಈ ವಿಚಾರದಲ್ಲಿ ಜನರಿಗೆ ಮಾದರಿಯಾಗಿರಬೇಕು.ಆದರೆ ಸಚಿವ ಡಾ.ಜಿ.ಪರಮೇಶ್ವರ್ ಅವರೇ ಬೆಟ್ಟಿಂಗ್ ಕಟ್ಟಲು ಮುಂದಾದರೆ ರಾಜ್ಯದ ಜನರು ಇನ್ನಷ್ಟು ತಪ್ಪು ಮಾಡುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಇದರ ಬದಲು ಕ್ರೀಡಾಪಟುಗಳಿಗೆ ಬಹುಮಾನ ನೀಡಿದ್ದರೆ ಸಾಕಿತ್ತು ಎಂದು ಪ್ರತಿಪಕ್ಷ ನಾಯಕ ಹೇಳಿದರು.
ಪಹಲ್ಗಾಮ್ನಲ್ಲಾದ ಭಯೋತ್ಪಾದಕ ದಾಳಿಯನ್ನು ಮರೆಯಲು ಸಾಧ್ಯವಿಲ್ಲ. ಭಾರತೀಯ ಯೋಧರು ಆಪರೇಶನ್ ಸಿಂದೂರ ಮೂಲಕ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದ್ದಾರೆ. ಪ್ರಪಂಚದ ಭೂಪಟದಿಂದ ಪಾಕಿಸ್ತಾನವನ್ನು ತೆಗೆದುಹಾಕುವಂತೆ ಮಾಡಬೇಕಿದೆ ಆಗ ಮಾತ್ರ ಶಾಂತಿ ನೆಲೆಸಲು ಸಾಧ್ಯ ಎಂದರು ಅಶೋಕ್.
