ಇಸ್ಲಾಮಾಬಾದ್ : ಬಲೂಚಿಸ್ತಾನದ ನೆಲದ ಮೇಲೆ ಸರಣಿ ದಾಳಿಗಳನ್ನು ನಡೆಸುತ್ತಿದ್ದ ಬಲೂಚ್ ಬಂಡುಕೋರರು ಈಗ ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನ್ ಕೋಸ್ಟ್ ಗಾರ್ಡ್ ನ ಗಸ್ತು ದೋಣಿಯ ಮೇಲೆ ದಾಳಿ ನಡೆಸಿದ್ದಾರೆ.
ಬಂಡುಕೋರರು ನಡೆಸಿದ ಈ ದಾಳಿಯಲ್ಲಿ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ. ಕಡಲ ಪ್ರಾಧಿಕಾರದ ಹಡಗಿನ ಮೇಲೆ ನಡೆದ ಮೊದಲ ದಾಳಿ ಇದು ಎನ್ನಲಾಗಿದೆ.
ಪಾಕಿಸ್ತಾನ-ಇರಾನ್ ಗಡಿಯ ಸಮೀಪವಿರುವ ಕರಾವಳಿ ಪ್ರದೇಶದಲ್ಲಿ ಕೋಸ್ಟ್ ಗಾರ್ಡ್ ದೋಣಿಯು ಮಾಮೂಲಿನಂತೆ ಗಸ್ತು ತಿರುಗುತ್ತಿತ್ತು. ಈ ವೇಳೆ ದೋಣಿಯನ್ನು ಸುತ್ತುವರೆದ ಬಂಡುಕೋರರು ಮನಬಂದಂತೆ ಗುಂಡಿನ ಮಳೆ ಕರೆದಿದ್ದಾರೆ.
ಅನಿರೀಕ್ಷಿತ ದಾಳಿಯಿಂದ ಬೆದರಿದ ಭದ್ರತಾ ಸಿಬ್ಬಂದಿ ಚೇತರಿಸಿಕೊಳ್ಳಲು ಸಮಯವೇ ಸಿಗಲಿಲ್ಲ,ಹಾಗಾಗಿ ಮೂವರು ಸೈನಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಈ ದಾಳಿಯ ತಾನೆ ಮಾಡಿದ್ದಾಗಿ ಹೇಳಿದೆ ಜತೆಗೆ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆಯನ್ನು ನೀಡಿದೆ
ಇನ್ನು ಮುಂದೆ ಸಮುದ್ರ ಗಡಿಗಳಲ್ಲೂ ದಾಳಿ ನಡೆಸುವುದು ನಮ್ಮ ಹೊಸ ಮಿಲಿಟರಿ ಕಾರ್ಯತಂತ್ರದ ಭಾಗವಾಗಿದೆ ಎಂದು ಬಿಎಲ್ಎ ಎಚ್ಚರಿಸಿದೆ.
ಆದರೆ ಪಾಕಿಸ್ತಾನ ಸರ್ಕಾರ ಈ ದಾಳಿಯ ಹಿಂದೆ ಅಫ್ಘಾನಿಸ್ತಾನದ ಕೈವಾಡವಿದೆ ಎಂದು ಆರೋಪಿಸಿದೆ.
ಬಲೂಚ್ ಉಗ್ರರಿಗೆ ಅಫ್ಘಾನಿಸ್ತಾನ ಆಶ್ರಯ ನೀಡುತ್ತಿದೆ ಮತ್ತು ಈ ದಾಳಿಗಳನ್ನು ಕಾಬೂಲ್ನಿಂದಲೇ ಯೋಜಿಸಲಾಗಿದೆ ಎಂದು ದೂರಿದೆ. ಆದರೆ, ಅಫ್ಘಾನಿಸ್ತಾನ ಸರ್ಕಾರ ಈ ಆರೋಪಗಳನ್ನು ನಿರಾಕರಿಸಿದೆ..
