ಯಳಂದೂರು: ವಿದ್ಯಾರ್ಥಿಗಳು ದೇಶಕ್ಕೆ ಹೊರೆ ಆಗಬಾರದು ದೇಶದ ಆಸ್ತಿ ಯಾಗಬೇಕು ಎಂದು ಸಿ ಎ. ಬಿ. ಐ ಅಧ್ಯಕ್ಷ ಮಹಾಂತೇಶ್ ಜಿ.ಕಿವಡದ ಸಣ್ಣ ಅವರು ತಿಳಿಸಿದರು.
ಯಳಂದೂರು ಪಟ್ಟಣದ ಎಸ್.ಡಿ.ವಿ.ಎಸ್ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 111ನೇ ಜಯಂತಿ ಹಾಗೂ ಎಸ್ ಡಿ.ವಿ. ಎಸ್. ಕ್ರಿಕೆಟ್ ಅಕಾಡೆಮಿ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸದಾ ಕ್ರಿಯಾಶೀಲರಾಗಿರಬೇಕು ಹಾಗೂ ವಿದ್ಯಾರ್ಥಿಗಳಿಗೆ ಗುರಿ ಮುಖ್ಯ ಚಟುವಟಿಕೆಗಳಲ್ಲಿ ಸದಾ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷಕರು ಹೆಚ್ಚು ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಶಿಸ್ತು ಅತ್ಯಂತ ಮುಖ್ಯ, ಇದು ಸಂಸ್ಕೃತಿ ಸಂಸ್ಕಾರ ಸನ್ನಡತೆಗೆ ಮಾರ್ಗದರ್ಶನವನ್ನು ನೀಡುತ್ತದೆ. ಶ್ರದ್ಧೆ, ಛಲ ಪ್ರತಿಯೊಬ್ಬರಲ್ಲೂ ಇರಬೇಕು. ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಮಹತ್ವ ನೀಡದೆ ಗುರಿ ಸಾಧನೆ ಕಡೆಗೆ ಹೆಚ್ಚು ಗಮನ ವಹಿಸಬೇಕು.
ಕಾಣುವ ಕನಸು ನನಸಾಗಿಸುವಂತೆ ಹೆಜ್ಜೆ ಇಡಬೇಕು. ಕನಸುಗಳು ಆದರ್ಶ ಜೀವನಕ್ಕೆ ಮುನ್ನುಡಿ ಬರೆಯುವಂತಿರಲಿ ಎಂದು ಮಹಾಂತೇಶ್ ಜಿ.ಕಿವಡದ ಸಣ್ಣ ಅವರು ತಿಳಿಸಿದರು.
ಐಟಿಎ ಪ್ರಾಂಶುಪಾಲ ವಿಖ್ಯಾತ್ ಅವರು ಮಾತನಾಡಿ, ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಪ್ರಥಮ ಬಾರಿಗೆ ನಮ್ಮ ವಿದ್ಯಾ ಸಂಸ್ಥೆಯ ಬಳ್ಳಿ ಹಬ್ಬದ ಅಂಗವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅವಕಾಶಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕ್ರಿಕೆಟ್ ಅಕಾಡೆಮಿಯನ್ನು ಪ್ರಾರಂಭಿಸಲಾಗಿದೆ. ಈ ಭಾಗದ ವಿದ್ಯಾರ್ಥಿಗಳು ಇದರ ಸದುಪಯೋಗಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ವಿ. ಮಲ್ಲಿಕಾರ್ಜುನ ಸ್ವಾಮಿ, ಪೋಷಕರ ಸಹಕಾರದಿಂದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನಮ್ಮ ವಿದ್ಯಾ ಸಂಸ್ಥೆಯು ನೀಡುತ್ತಿದ್ದು ಕ್ರಿಕೆಟ್ ತರಬೇತಿಯನ್ನು ಪಡೆದು ನಮ್ಮ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳು ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ನರೇಂದ್ರ ಫೌಂಡೇಶನ್ ಕೆ. ವಿ.ರಾಜಣ್ಣ, ರವೀಂದ್ರ, ನಿರ್ಮಿತ್, ಮುಖ್ಯ ಶಿಕ್ಷಕಿ ದೀಪ, ಸುಜಾತ ಮಲ್ಲಿಕಾರ್ಜುನ ಸ್ವಾಮಿ, ಗೌರಮ್ಮ ಮಹದೇವಸ್ವಾಮಿ, ಬ್ರಿಜೇಶ್ ಓಲೇ ವೇರ, ಶಿಕ್ಷಕರು,ಪೋಷಕರು ಶಿಕ್ಷಕ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.
