ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರ (ಪೊಲೀಸ್ ಬಡಾವಣೆ) ನಿವಾಸಿಗಳು ಮೂಲಭೂತ ಸೌಕರ್ಯ ಕಲ್ಪಿಸುವಂತೆ ಮತ್ತು ತಿಪ್ಪಯ್ಯನ ಕೆರೆಗೆ ಕಲುಷಿತ ನೀರು ಸೇರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ಬಡಾವಣೆಯ ಮುಖ್ಯದ್ವಾರದ ಬಳಿ ನೂರಾರು ನಿವಾಸಿಗಳು ರಸ್ತೆ ತಡೆ ನಡೆಸಿ ವಾಹನ ಸಂಚಾರ ಬಂದ್ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡಿದರು.
ಇದರಿಂದಾಗಿ ಕೆಲ ನಿಮಿಷಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಯಿತು.
ಕರ್ನಾಟಕ ಪೊಲೀಸ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿರ್ಮಿಸಿರುವ ಈ ಬಡಾವಣೆಯಲ್ಲಿ ಮೂಲಸೌಕರ್ಯ ಮರೀಚಿಕೆಯಾಗಿದೆ. ಕುಡಿಯುವ ನೀರಿನ ಸಮಸ್ಯೆ, ಹದಗೆಟ್ಟ ರಸ್ತೆಗಳು ಮತ್ತು ಕೆರೆ ಮಾಲಿನ್ಯ ತೀವ್ರವಾಗಿದೆ. ಕೊಳವೆಬಾವಿ ನೀರು ಕ್ಷಾರಯುಕ್ತವಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ. ಕೊಳಚೆ ನೀರು ಸೇರುವುದರಿಂದ ಕೆರೆಯ ಪರಿಸರ ಹದಗೆಟ್ಟಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಥಾಮಸ್, ಶಿವಸ್ವಾಮಿ, ಅಶೋಕ್, ಮನುಕುಮಾರ್, ಮೋಹನ್ ರಾವ್ ಸೇರಿದಂತೆ 300ಕ್ಕೂ ಹೆಚ್ಚು ನಿವಾಸಿಗಳು ಭಾಗವಹಿಸಿದ್ದರು.
