ಮೈಸೂರು: ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿದ್ದ ಡಾ.ರಾಜಕುಮಾರ್ ಪುತ್ಥಳಿಯನ್ನು ಮೂಲ ಸ್ಥಳದಲ್ಲೇ ಮರು ಸ್ಥಾಪಿಸಲು ನಿರ್ಧರಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಾಧಿಕಾರ, ಕನ್ನಡಪರ ಸಂಘಟನೆಗಳು ಮತ್ತು ಡಾ.ರಾಜಕುಮಾರ್ ಅಭಿಮಾನಿಗಳ ಸಂಘದೊಂದಿಗೆ ನಡೆದ ಸುದೀರ್ಘ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಇತ್ತೀಚೆಗೆ ದಸರಾ ವಸ್ತುಪ್ರದರ್ಶನ ಆವರಣದಿಂದ ಡಾ.ರಾಜ್ ಪುತ್ಥಳಿಯನ್ನು ಸ್ಥಳಾಂತರಿಸಲಾಗಿತ್ತು. ಇದಕ್ಕೆ ಎಂಎಲ್ಸಿ ರಘು ಕೌಟಿಲ್ಯ ಆಕ್ರೋಶ ವ್ಯಕ್ತಪಡಿಸಿದ್ದರು. ಮೊದಲಿದ್ದ ಸ್ಥಳದಲ್ಲೇ ಪುತ್ಥಳಿಯನ್ನು ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿ ಸೆ.30ರವರೆಗೆ ಗಡುವು ನೀಡಿದ್ದರು.
ಇದಾದ ಬಳಿಕ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ನಂತರ ಪ್ರಾಧಿಕಾರದ ಅಧ್ಯಕ್ಷ ಆಯೂಬ್ ಖಾನ್ ಸ್ಪಷ್ಟನೆ ನೀಡಿ, ಪುತ್ಥಳಿಯನ್ನು ಪುನರ್ ಪ್ರತಿಷ್ಠಾಪಿಸುವುದಾಗಿ ಒಪ್ಪಿಕೊಂಡಿದ್ದರು.
ಅಂತೂ ರಾಜ್ ಪ್ರತಿಮೆ ವಸ್ತುಪ್ರದರ್ಶನ ಆವರಣದಲ್ಲಿ ಮೊದಲಿದ್ದಲ್ಲೇ ಇರಲಿದೆ.
