ಮೈಸೂರು: ಆಹಾರ, ನಾಗರಿಕ ಸರಬರಾಜು ಇಲಾಖಾ ವತಿಯಿಂದ ನ್ಯಾಯಬೆಲೆ ಅಂಗಡಿ ಗಳ ಮೂಲಕ ವಿತರಣೆ ಮಾಡುವ ಪಡಿತರ ಅಕ್ಕಿಯು ಸರ್ವರ್ ಸಮಸ್ಯೆಯಿಂದಾಗಿ ಗ್ರಾಹಕರಿಗೆ ಸರಿಯಾಗಿ ತಲುಪಿಸಲಾಗದೆ ಅಡಚಣೆಯಾಗುತ್ತಿದೆ ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಗಮನ ಸೆಳೆದಿದೆ.
ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಅಕ್ಕಿ ವಿತರಣೆಯಲ್ಲಿ ಅಗುತ್ತಿರುವ ವ್ಯತ್ಯಯವನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಆಹಾರ, ನಾಗರಿಕ ಸರಬುರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಮಂಟೇಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸರ್ವರ್ ಸಮಸ್ಯೆಯಿಂದಾಗಿ ಗ್ರಾಹಕರು ತಮ್ಮ ಪಡಿತರ ಅಕ್ಕಿ ಪಡೆಯಲು ಸಂಬಂಧ ಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ದಿನ ಪೂರ್ತಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮೀಣ ಭಾಗದ ಕೆಲ ನ್ಯಾಯಬೆಲೆ ಅಂಗಡಿಯಲ್ಲಿ ದಿನ ಪೂರ್ತಿ ಕಾದು ನಿಂತರೂ ಸರ್ವರ್ ಸಮಸ್ಯೆಯಿಂದ ಅಕ್ಕಿ ಲಭಿಸದೆ ಬರಿಗೈಯಲ್ಲಿ ವಾಪಸ್ ಹೋಗುವಂತಾಗಿದೆ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.
ಈ ರೀತಿಯ ತಾಂತ್ರಿಕ ಅಡಚಣೆಯಿಂದಾಗಿ ಕೂಲಿ ಕೆಲಸ ಮಾಡುತ್ತಿರುವ ಬಿಪಿಎಲ್ ಪಡಿತರ ಚೀಟಿದಾರ ಗ್ರಾಹಕರು ಸಕಾಲದಲ್ಲಿ ಅಕ್ಕಿ ಸಿಗದೆ ನ್ಯಾಯಬೆಲೆ ಅಂಗಡಿ ಸಿಬ್ಬಂದಿಗಳೊಂದಿಗೆ ಜಗಳ ಮಾಡುವಂತಾಗಿದೆ.
ಸಂಬಂಧ ಪಟ್ಟ ಪಡಿತರ ಅಧಿಕಾರಿಗಳಲ್ಲಿ ವಿಚಾರಿಸಿದರೆ ಎರಡು ತಿಂಗಳ ಅಕ್ಕಿಯನ್ನು ಒಂದೇ ತಿಂಗಳಿನಲ್ಲಿ ನೀಡುತ್ತಿರುವುದರಿಂದ ಸರ್ವರ್ ಸಮಸ್ಯೆ ಉದ್ಭವಿಸಿದೆ ಎಂದು ಸಬೂಬು ನೀಡುತ್ತಿದ್ದಾರೆ ಎಂದು ಎಬಿಜಿಪಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಸರ್ವರ್ ಸಮಸ್ಯೆ ತಿಂಗಳ ಅಂತ್ಯದವರೆಗೂ ಹೀಗೆಯೇ ಮುಂದುವರಿದರೆ ಕೆಲವರು ಪಡಿತರ ಅಕ್ಕಿ ಪಡೆಯುವಲ್ಲಿ ವಂಚಿತರಾಗಬಹುದು ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಉಪಾಧ್ಯಕ್ಷರಾದ ವಿಕ್ರಂ ಅಯ್ಯಂಗಾರ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಮೇ ತಿಂಗಳ ಅಕ್ಕಿಯನ್ನು ರಾಜ್ಯ ಸರಕಾರ ವಿತರಿಸಿಲ್ಲ, ಕೇಂದ್ರ ಸರಕಾರವು ಮುಂಗಡವಾಗಿ 2 ತಿಂಗಳಿಗೆ ಬಿಡುಗಡೆ ಮಾಡಿದ ಅಕ್ಕಿಯನ್ನು ಹೊಂದಾಣಿಕೆ ಮಾಡಿಕೊಂಡು ಎರಡೆರಡು ಬಾರಿ ಗ್ರಾಹಕರಿಂದ ಬೆರಳ ಅಚ್ಚು ( ತಂಬ್) ತೆಗೆದುಕೊಳ್ಳುವುದರಿಂದ ಸರ್ವರ್ ಸಮಸ್ಯೆಗೆ ಇನ್ನೊಂದು ಕಾರಣ ಎಂದು ಹೇಳಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ಮೇ ತಿಂಗಳ ಅಕ್ಕಿಯನ್ನು ಜೂನ್ ಮೊದಲ ವಾರದವರೆಗೂ ನೀಡಲು ಸೂಕ್ತ ಆದೇಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ರಾಜ್ಯ ಸಂಚಾಲಕರಾದ ಡಾ.ಜಿ ವಿ ರವಿಶಂಕರ್,
ಕಾರ್ಯದರ್ಶಿ ಶ್ರೀಕಂಠೇಶ್,
ಆನಂದ್ ,ಸಂದೇಶ್ ,ದುರ್ಗಾ ಪ್ರಸಾದ್ ,ಹರೀಶ್,ದಯಾನಂದ ನಾಯಕ್, ದೂರ ರಾಜಣ್ಣ ಮತ್ತಿತರರು ಹಾಜರಿದ್ದರು.
