ಮೈಸೂರು: ಬಿಡದಿ ಟೌನ್ಶಿಪ್ ಯೋಜನೆ ಹೆಸರಿನಲ್ಲಿ ದುಡ್ಡು ಲೂಟಿ ಮಾಡುವ ಕೆಲಸ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಮೈಸೂರಿಗೆ ಆಗಮಿಸಿದ್ದ ಹೆಚ್ ಡಿ ಕೆ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಬಿಡದಿ ಟೌನ್ಶಿಪ್ ಹೆಸರಲ್ಲಿ ದುಡ್ಡು ಲೂಟಿ ಹೊಡೆಯುವ ಸ್ಕೀಮ್ ಇದು. ನಾನು ಕಿಕ್ ಬ್ಯಾಕ್ ಪಡೆದಿದ್ದರೆ ತನಿಖೆ ಮಾಡಲಿ. ನನ್ನನ್ನಾಗಲಿ ದೇವೇಗೌಡರನ್ನಾಗಲಿ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ನಾನು ಲಾಟರಿ ಬ್ಯಾನ್ ಮಾಡಿದಾಗ ತಮಿಳುನಾಡಿನಿಂದ ಬ್ಯಾಗ್ ಹಿಡಿದುಕೊಂಡು ಬಂದಿದ್ದು ಯಾರು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕುಮಾರಸ್ವಾಮಿ ಮಾರ್ಮಿಕವಾಗಿ ಪ್ರಶ್ನಿಸಿದರು.
ಬಿಡದಿ ಟೌನ್ಶಿಪ್ ಯೋಜನೆ ಯಾವ ಕಾರಣಕ್ಕೂ ಆಗಲು ಬಿಡುವುದಿಲ್ಲ,ರೈತರು, ಹೆಣ್ಣುಮಕ್ಕಳು ಭದ್ರವಾಗಿದ್ದರೆ ಬಿಡದಿ ಟೌನ್ಶಿಪ್ ಆಗಲ್ಲ. ಕೆಟ್ಟ ಭ್ರಷ್ಟ ಸರ್ಕಾರಕ್ಕೆ ತಿರುಗೇಟು ಕೊಡಲು ನಮ್ಮ ಶಾಸಕರು ಸಿದ್ಧರಿದ್ದಾರೆ ಎಂದು ತಿಳಿಸಿದರು.
ಬೀದಿ ಬದಿ ವ್ಯಾಪಾರಸ್ಥರನ್ನು ಎತ್ತಿಸಿದಿರಿ. ಅವರಿಗೆ ಪರ್ಯಾಯ ಮಾರ್ಗ ಕೊಟ್ಟಿರಾ, ಕೃಷ್ಣ ಬೈರೇಗೌಡ ಅವರು ನಾನು ಖರೀದಿ ಮಾಡಿದ ಜಾಗ ಒತ್ತುವರಿ ಎಂದು ಆರೋಪಿಸಿ ಎಸ್ಐಟಿ ಕೂಡ ರಚನೆ ಮಾಡಿದರು. ಇನ್ನು ಒಂದೂವರೆ ವರ್ಷ ಅಧಿಕಾರ ಮಾತ್ರ ಬಾಕಿ ಇರುವುದು. ಮುಂದಿನ ಚುನಾವಣೆಯಲ್ಲಿ ಸರ್ವನಾಶವಾಗುತ್ತೀರಾ ಹುಷಾರ್ ಎಂದು ಕುಮಾರಸ್ವಾಮಿ ಎಚ್ಚರಿಸಿದರು.
ನೈಸ್ ರೋಡ್ನಲ್ಲಿ ಅಕ್ರಮವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ,ಇದನ್ನು ರಾಜ್ಯ ಸರ್ಕಾರದ ಪರ ವಾದ ಮಂಡಿಸಿರುವ ವಕೀಲರೇ ಹೇಳಿದ್ದಾರೆ. ಹೀಗಾಗಿ ನಾನು ರೈತರಿಗೆ ಟೋಲ್ ಕಟ್ಟಬೇಡಿ ಎಂದು ಹೇಳಿದ್ದೇನೆ. ಪ್ರಿಯಾಂಕ್ ಖರ್ಗೆ ಅವರು ಸ್ಪರ್ಧೆಯಲ್ಲಿ ಮಾತನಾಡುತ್ತಾರೆ. ಟೋಲ್ ಸಂಗ್ರಹ ಮಾಡುತ್ತಿರುವುದು ಕೇಂದ್ರ ಸರ್ಕಾರ ಎಂದು ಹೇಳುತ್ತಾರೆ. ಯಾರು ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಎಂಬ ಬಗ್ಗೆ ಅರಿವಿರಲಿ ಎಂದು ಹೆಚ್ ಡಿ ಕೆ ಹೇಳಿದರು.
