ಮೈಸೂರು: ಮಹಿಳೆಯರಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ಸ್ವಾವಲಂಬನೆಯ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಚಿರ ಜೀವ ಸೇವಾ ಟ್ರಸ್ಟ್, ಪಂಚಾಯತ್ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿ ಹಾಗೂ ಸರ್ವಕಲ ಸೇವಾ ಟ್ರಸ್ಟ್ ವತಿಯಿಂದ ಸೆಲ್ಫಿ ವರಮಹಾಲಕ್ಷ್ಮಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಹುಣಸೂರು–ಮೈಸೂರು ಮುಖ್ಯ ರಸ್ತೆಯಲ್ಲಿರುವ ಕೃಷ್ಣ ಬೇಕರಿ ಪಕ್ಕದಲ್ಲಿರುವ ಪಿ ಜಿ ಆರ್ ಎಸ್ ಎಸ್ ಕಚೇರಿಯಲ್ಲಿ ಕಾರ್ಯಕ್ರಮದಲ್ಲಿ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡರು.
ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಯಾದವ್ ಹರೀಶ್, ಆರ್ಟಿಐ ಮಾಹಿತಿ ಪತ್ರಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಅಮರ್ ಹಾಗೂ ಚಿರ ಜೀವ ಸೇವಾ ಟ್ರಸ್ಟ್ ಅಧ್ಯಕ್ಷರಾದ ರಕ್ತದಾನಿ ಮಂಜು ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ಹಾಗೂ ಉಡುಗೊರೆಗಳನ್ನು ನೀಡಿ ಗೌರವಿಸಲಾಯಿತು.
ಮಹಿಳೆಯರು ತಮ್ಮ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಸಮಾಜದ ಮುಂದೆ ಪ್ರದರ್ಶಿಸಲು ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿವೆ.
ಮಹಿಳೆಯರು ಕೇವಲ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವವರಾಗಿರದೆ, ಸಮಾಜದ ಅಭಿವೃದ್ಧಿಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಪ್ರತಿಯೊಬ್ಬ ಮಹಿಳೆಯಲ್ಲೂ ವಿಶೇಷವಾದ ಪ್ರತಿಭೆ, ಸಾಮರ್ಥ್ಯ ಮತ್ತು ಸೃಜನಶೀಲತೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಉದ್ಘಾಟಕರು ತಿಳಿಸಿದರು.
ಮಹಿಳೆಯರು ಶಿಕ್ಷಣ, ಉದ್ಯೋಗ, ಸ್ವಯಂ ಉದ್ಯೋಗ, ಕಲೆ, ಕ್ರೀಡೆ ಹಾಗೂ ಸಾಮಾಜಿಕ ಸೇವೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಮಹಿಳೆಯರಿಗೆ ಅವಕಾಶ ಮತ್ತು ಪ್ರೋತ್ಸಾಹ ನೀಡಿದಾಗ ಅವರು ತಮ್ಮ ಕುಟುಂಬದ ಜೊತೆಗೆ ಸಮಾಜದ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಹಿಳೆಯರ ಪ್ರತಿಭೆಯನ್ನು ಗುರುತಿಸಿ, ಅವರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿಯೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಆಯೋಜಕರು ತಿಳಿಸಿದರು.
