ಬೆಂಗಳೂರು: ರಾಜ್ಯದ ಹಲವು ಗ್ರಾಮ ಪಂಚಾಯಿತಿ,ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅವಧಿ ಪೂರ್ಣಗೊಂಡಿದ್ದರೂ ಸಕಾಲದಲ್ಲಿ ಚುನಾವಣೆ ನಡೆದಿಲ್ಲ ಎಂದು ಆಪ್ ಅಸಮಾಧಾನ ವ್ಯಕ್ತಪಡಿಸಿದೆ.
ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆ
ಯದಿರುವುದು ಸ್ಥಳೀಯ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ಉಂಟುಮಾಡುತ್ತಿದೆ ಎಂದು ದೆಹಲಿ ವಿಧಾನಸಭೆಯ ಉಪನಾಯಕರು ಹಾಗೂ ಆಮ್ ಆದ್ಮಿ ಪಾರ್ಟಿ ಕರ್ನಾಟಕ ಉಸ್ತುವಾರಿ ಅನಿಲ್ ಜಾ ಬೇಸರ ವ್ಯಕ್ತಪಡಿಸಿದರು.
ಈ ಕುರಿತು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರನ್ನು ಭೇಟಿ ಮಾಡಿ ಇಂದು ಮನವಿ ಸಲ್ಲಿಸಿದ ಅವರು, ಅವಧಿ ಪೂರ್ಣಗೊಂಡಿರುವ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಮತ್ತು ಕಾನೂನುಬದ್ಧವಾಗಿ ಸಾಧ್ಯವಾದಷ್ಟು ಶೀಘ್ರವಾಗಿ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳ ಆಶಯದಂತೆ ಸ್ಥಳೀಯ ಆಡಳಿತದಲ್ಲಿ ಜನರಿಂದ ನೇರವಾಗಿ ಆಯ್ಕೆಯಾಗುವ ಪ್ರತಿನಿಧಿಗಳ ಮೂಲಕ ಅಧಿಕಾರ ವಿಕೇಂದ್ರೀಕರಣವಾಗಬೇಕು. ಆದರೆ ಚುನಾವಣೆಗಳು ವಿಳಂಬವಾಗು ತ್ತಿರುವುದರಿಂದ ಗ್ರಾಮೀಣ ಹಾಗೂ ನಗರ ಮಟ್ಟದಲ್ಲಿ ಜನಪ್ರತಿನಿಧಿಗಳ ಆಡಳಿತದ ಅವಕಾಶ ಸೀಮಿತವಾಗುತ್ತಿದೆ ಎಂದು ಅವರು ತಿಳಿಸಿದರು.
ಹಿಂದುಳಿದ ವರ್ಗಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ರಾಜಕೀಯವಾಗಿ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಹಾಗೂ ಸಂವಿಧಾನದ ವಿಕೇಂದ್ರೀಕರಣದ ಆಶಯವನ್ನು ಸಾಕಾರಗೊಳಿಸಲು ಸ್ಥಳೀಯ ಸಂಸ್ಥೆಗಳಿಗೆ ನಿಯಮಿತವಾಗಿ ಚುನಾವಣೆ ನಡೆಯಬೇಕು. ಆಡಳಿತಾತ್ಮಕ ಅಥವಾ ಕಾನೂನು ಪ್ರಕ್ರಿಯೆಗಳ ಹೆಸರಿನಲ್ಲಿ ಚುನಾವಣೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಬಾರದು ಎಂದು ಅನಿಲ್ ಜಾ ಹೇಳಿದರು.
ಚುನಾವಣೆ ನಡೆಸಲು ಅಗತ್ಯವಿರುವ ಕಾನೂನು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ನ್ಯಾಯಾಲಯಗಳಲ್ಲಿ ಯಾವುದೇ ವಿಚಾರಗಳು ಬಾಕಿಯಿದ್ದರೆ, ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಅವುಗಳನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅನಿಲ್ ಝಾ ಆಗ್ರಹಿಸಿದರು.
ಪಕ್ಷದ ನಿಯೋಗದಲ್ಲಿ ಕಾರ್ಯಾಧ್ಯಕ್ಷ ಸೀತಾರಾಮ ಗುಂಡಪ್ಪ , ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ, ಯುವ ಘಟಕದ ರಾಜ್ಯಾಧ್ಯಕ್ಷ ಲೋಹಿತ್ ಕುಮಾರ್ ಸೇರಿದಂತೆ ಜಗದೀಶ್ ಚಂದ್ರ, ದೇವರಸಂ, ಪುಷ್ಪ ಕೇಶವ್ ಅನೇಕ ನಾಯಕರುಗ ಹಾಜರಿದ್ದರು.
