ನವದೆಹಲಿ: ಅಮೇರಿಕಾದ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿರುವ ಇರಾನ್
ಮಧ್ಯಪ್ರಾಚ್ಯ ದೇಶಗಳ ಮೇಲೂ ದಾಳಿ ಮುಂದುವರಿಸಿದೆ.ಹಾಗಾಗಿ ಅಲ್ಲಿ ಉದ್ವಿಗ್ನತೆ
ಉಂಟಾಗಿದ್ದು, ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಅಲ್ಲಿನ ರಾಜನ ಜತೆ ಮಾತನಾಡಿದ್ದಾರೆ.
ಬಹ್ರೇನ್ ರಾಜ ಮತ್ತು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಜೊತೆ ದೂರವಾಣಿ ಕರೆ ಮಾಡಿ ಮೋದಿ ಮಾತನಾಡಿ ದೈರ್ಯ ಹೇಳಿದ್ದಾರೆ.
ಈ ಎರಡೂ ದೇಶಗಳ ಮೇಲೆ ಇರಾನ್ ನಡೆಸಿದ ದಾಳಿಯನ್ನು ಪ್ರಧಾನಿ ಖಂಡಿಸಿದ್ದಾರೆ.
ಬಹ್ರೇನ್ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಮತ್ತು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.
ಶಾಂತಿಯ ಪುನಃಸ್ಥಾಪನೆಗಾಗಿ ರಾಜತಾಂತ್ರಿಕ ಪ್ರಯತ್ನಗಳಿಗೆ ಭಾರತದ ಬೆಂಬಲವಿದೆ ಎಂದು ಮೋದಿ ಪುನರುಚ್ಚರಿಸಿದ್ದಾರೆ.
ಇದನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮೋದಿ, ಬಹ್ರೇನ್ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದೆ. ಭಾರತವು ಬಹ್ರೇನ್ ಮೇಲಿನ ದಾಳಿಯನ್ನು ಖಂಡಿಸುತ್ತದೆ ಮತ್ತು ಕಷ್ಟದ ಸಮಯದಲ್ಲಿ ಅಲ್ಲಿನ ಜನರೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತದೆ ಎಂದು ತಿಳಿಸಿದ್ದೇನೆ. ಬಹ್ರೇನ್ನಲ್ಲಿರುವ ಭಾರತೀಯರಿಗೆ ನೀಡಿದ ಬೆಂಬಲಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಿದೆ ಎಂದು ತಿಳಿಸಿದ್ದಾರೆ.
ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮೋದಿ ಮಾತನಾಡಿದ್ದು, ಸೌದಿ ಅರೇಬಿಯಾದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುವ ಇತ್ತೀಚಿನ ದಾಳಿಗಳನ್ನು ಭಾರತ ಖಂಡಿಸುತ್ತದೆ.
ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯ ಪುನಃಸ್ಥಾಪನೆ ಅತ್ಯಂತ ಮಹತ್ವದ್ದಾಗಿದೆ ಎಂದು ನಾವು ಒಪ್ಪಿಕೊಂಡಿದ್ದೇವೆ.ಕಷ್ಟದ ಸಮಯದಲ್ಲಿ ಭಾರತೀಯರ ಸುರಕ್ಷತೆ ನೋಡಿಕೊಂಡಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಿದ್ದೇನೆ ಎಂದು ಮೋದಿ ತಿಳಿಸಿದ್ದಾರೆ.
