ಕೊಡಗು: ಕಾಡಾನೆ ದಾಳಿಯಿಂದಾಗಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಕೊಡಗಿನಲ್ಲಿ ನಡೆದಿದೆ.
ಮದೆ ಬೆಟ್ಟತ್ತೂರು ಗ್ರಾಮದ ಗಿರೀಶ್ ಎಂಬುವವರ ಪುತ್ರಿ ಪೂಜಾ ಮೃತಪಟ್ಟ ದುರ್ದೈವಿ.
ಪೂಜಾ ಮಡಿಕೇರಿಯ ಸಂತ ಮೈಕಲ್ ಶಾಲೆಯ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಭಾನುವಾರ ಸಂಜೆ ಬೆಟ್ಟತ್ತೂರಿನ ತನ್ನ ಮನೆಗೆ ಬಸ್ಸಿನಲ್ಲಿ ಬಂದು ಮನೆಗೆ ನಡೆದು ಹೋಗುತ್ತಿದ್ದಾಗ ಏಕಾಏಕಿ ಕಾಡಾನೆ ದಾಳಿ ನಡೆಸಿದೆ.
ಇದರಿಂದ ಪೂಜಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಟ್ಟತ್ತೂರಿನ ಸುತ್ತಮುತ್ತ ಆನೆಗಳು ಓಡಾಡುತ್ತಿದ್ದು, ಆನೆ ದಾಳಿ ತಡೆಯಲು ಅರಣ್ಯ ಇಲಾಖೆ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
