ಮೈಸೂರು: ಶಾಲಾ ಮಕ್ಕಳ ಜತೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸಾರ್ವಜನಿಕ ಸ್ಥಳದ ಸ್ವಚ್ಛತೆಗೆ ಇಳಿದು ಇತರರಿಗೂ ದಾರಿ ತೋರಿದ್ದಾರೆ.
ನಗರದ ವಾರ್ಡ್ ನಂ. 49ರ ಬಿ.ಬಿ. ಗಾರ್ಡನ್ ರಸ್ತೆಯಲ್ಲಿ ಹಲವು ವರ್ಷಗಳಿಂದ ಸಮರ್ಪಕ ಸ್ವಚ್ಛತೆ ಕಾಣದೆ ಪಾದಚಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದರು.
ಇದನ್ನು ಮನಗಂಡ ನಗರ ಪಾಲಿಕೆ ಮಾಜಿ ಸದಸ್ಯೆ ಸೌಮ್ಯ ಉಮೇಶ್, ಸ್ವಚ್ಚತೆಗೆ ಮುಂದಾದರು. ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಕೃಷ್ಣರಾಜೇಂದ್ರ ಶಾಲೆಯ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಿದರು.
ನೈರ್ಮಲ್ಯಗೊಂಡಿದ್ದ ಸ್ಥಳವನ್ನು ಸ್ವಚ್ಛಗೊಳಿಸಿದ ಮಕ್ಕಳು ಮತ್ತು ಅಧಿಕಾರಿಗಳು ರಂಗೋಲಿ ಬಿಡಿಸಿ, ಗೋಡೆಗಳ ಮೇಲೆ ಸ್ವಚ್ಛತೆಯ ಸಂದೇಶಗಳನ್ನು ಬರೆದು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಈ ಮೂಲಕ ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯ ಮಹತ್ವವನ್ನು ಜನರಿಗೆ ತಲುಪಿಸುವ ಪ್ರಯತ್ನ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೌಮ್ಯ ಉಮೇಶ್, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಕ್ಕಳು ಉತ್ಸಾಹದಿಂದ ಕಸ ಸಂಗ್ರಹಿಸಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ ನಾಗರಿಕರಲ್ಲಿ ಜಾಗೃತಿ ಮೂಡಿಸಿದ್ದು, 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದಂತಾಗಿದೆ ಎಂದು ಹೇಳಿದರು.
ಸ್ವಚ್ಛ ಪರಿಸರ ನಿರ್ಮಾಣವು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮಕ್ಕಳು ತೋರಿದ ಕಾಳಜಿ ಮತ್ತು ಸಾಮಾಜಿಕ ಬದ್ಧತೆ ಎಲ್ಲರಿಗೂ ಮಾದರಿಯಾಗಿದೆ. ಸ್ವಚ್ಛ ಭಾರತ ಅಭಿಯಾನದ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಅವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಉಮೇಶ್, ವಾರ್ಡ್ ನಂಬರ್ 49ರ ಆರೋಗ್ಯ ನಿರೀಕ್ಷಕರಾದ ಶೋಭಾ, ಸ್ವಾಮಿ, ಕಿರಣ್ ,ಸುದರ್ಶನ್ ಗೌಡ, ಹಾಗೂ ನಗರಪಾಲಿಕ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಸ್ಥಳೀಯ ನಿವಾಸಿಗಳು ಸ್ವಚ್ಛತೆಯಲ್ಲಿ ಸಾತ್ ನೀಡಿದರು.
