ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ವಿಷ್ಣುಗಢ-ಪಿಪಲ್ಕೋಟಿ ಜಲವಿದ್ಯುತ್ ಯೋಜನೆಯ ನಿರ್ಮಾಣ ಹಂತದ ಸುರಂಗಕ್ಕೆ ನೀರು ನುಗ್ಗಿದ ಪರಿಣಾಮ ಸುರಂಗ ಕುಸಿದು ಏಳು ಕಾರ್ಮಿಕರು ಮೃತಪಟ್ಟಿದ್ದಾರೆ.
ಈ ಅವಘಡದಲ್ಲಿ 14 ಮಂದಿ ಗಾಯಗೊಂಡಿದ್ದಾರೆ
ಎಚ್ಸಿಸಿ ನಿರ್ಮಿಸುತ್ತಿರುವ ಸುರಂಗದೊಳಗೆ ದೊಡ್ಡ ಪ್ರಮಾಣದ ಅವಶೇಷಗಳು ಮತ್ತು ನೀರು ಇದ್ದಕ್ಕಿದ್ದಂತೆ ನುಗ್ಗಿದಾಗ ಈ ಅವಘಡ ಸಂಭವಿಸಿದೆ. 22 ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದರು.
ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ರಾಜ್ಯ ವಿಪತ್ತು ನಿರ್ವಹಣಾ ಪಡೆ,ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಇತರ ಏಜೆನ್ಸಿಗಳ ತಂಡಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದವು.
ರಕ್ಷಣಾ ಕಾರ್ಯಾಚರಣೆಯಲ್ಲಿ 22 ಕಾರ್ಮಿಕರಲ್ಲಿ 14 ಮಂದಿ ಗಾಯಗೊಂಡಿದ್ದು, ಅವರನ್ನು ರಕ್ಷಣೆ ಮಾಡಿ,ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತು ಒಬ್ಬರು ನಾಪತ್ತೆಯಾಗಿದ್ದಾರೆ. ಉಳಿದ 7 ಮಂದಿ ಸಾವನ್ನಪ್ಪಿದ್ದಾರೆ.
ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುತ್ತಿದ್ದು, ಹಲವಾರು ಕಾರ್ಮಿಕರನ್ನು ರಕ್ಷಿಸಲಾಗಿದೆ ಮತ್ತು ಇನ್ನೂ ಒಳಗೆ ಸಿಲುಕಿರುವವರನ್ನು ರಕ್ಷಿಸಲು ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಲಾಗುತ್ತಿದೆ. ಮತ್ತು ಘಟನೆಯ ಬಗ್ಗೆ ಜಾರ್ಖಂಡ್ ಮತ್ತು ಛತ್ತೀಸ್ಗಢದ ಸಿಎಂಗಳ ಜೊತೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.
