ಬೆಂಗಳೂರು: ಕರ್ತವ್ಯದಲ್ಲಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೇಲೆ ತಮ್ಮ ಪುತ್ರಿ ಐಶ್ವರ್ಯಾ ಕಪಾಳಮೋಕ್ಷ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭೀಮನ ಅಮಾವಾಸ್ಯೆ ದಿನ ನನ್ನ ಮಗಳು ಇಬ್ಬರು ಸಣ್ಣ ಮಕ್ಕಳೊಂದಿಗೆ ಆರತಿ ಉಕ್ಕಡ ದೇವಸ್ಥಾನಕ್ಕೆ ತೆರಳಿದ್ದಳು. ಆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಸಬ್ ಇನ್ಸ್ಪೆಕ್ಟರ್ ಅವಳನ್ನು ಒಳಗೆ ಬಿಡಲಿಲ್ಲ. ವಿಐಪಿ ಸಾಲಿನಲ್ಲಿ ನಿಂತಿದ್ದಾಗ ಬೇರೆಯವರನ್ನು ಒಳಗಡೆ ಬಿಟ್ಟಿದ್ದರು. ಕ್ರಿಯೆಗೆ ಪ್ರತಿಕ್ರಿಯೆ ಸಹಜವಾಗಿ ಇರುತ್ತದೆ. ಮಾತಿಗೆ ಮಾತು ಬೆಳೆದು ಈ ಅಹಿತಕರ ಘಟನೆ ನಡೆದಿರಬಹುದು. ಸ್ಥಳದಲ್ಲಿ ವಾಸ್ತವವಾಗಿ ಏನು ನಡೆಯಿತು ಎಂಬುದು ನನಗೆ ಪೂರ್ಣವಾಗಿ ತಿಳಿದಿಲ್ಲ ಎಂದು ತಿಳಿಸಿದರು.
ಘಟನೆಯಲ್ಲಿ ನನ್ನ ಮಗಳ ಕಡೆಯ ದೂರು ಏನಿತ್ತು ಎಂಬುದನ್ನೂ ಪೊಲೀಸರು ಆಲಿಸಬೇಕಿತ್ತು. ಈ ಸಂಬಂಧ ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ನನ್ನ ಮಗಳದ್ದು ತಪ್ಪಿದ್ದರೆ ನಾನು ಸಾರ್ವಜನಿಕವಾಗಿ ಕ್ಷಮೆ ಕೇಳಲು ಸಿದ್ಧ. ಅವಳು ಆ ಕ್ಷಣದಲ್ಲಿ ತಾಳ್ಮೆ ಕಳೆದುಕೊಂಡಿರಬಹುದು. ಆದರೆ ನಾವು ಸಾರ್ವಜನಿಕ ಜೀವನದಲ್ಲಿರುವವರು, ಈ ರೀತಿ ಎಂದಿಗೂ ನಡೆದುಕೊಳ್ಳಬಾರದು. ಹೀಗಾಗಿ ನನ್ನ ಮಗಳ ವರ್ತನೆಗಾಗಿ ನಾನೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದರು.
12ರಂದು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವಸ್ಥಾನದಲ್ಲಿ ಭೀಮನ ಅಮಾವಾಸ್ಯೆ ಹಿನ್ನೆಲೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಈ ವೇಳೆ ಶಾಸಕರ ಪುತ್ರಿ ಐಶ್ವರ್ಯ ಅವರು ತಮ್ಮ ಪ್ರಭಾವ ಬಳಸಿ ವಿಐಪಿ ಪ್ರವೇಶ ಪಡೆದಿದ್ದರು. ಗರ್ಭಗುಡಿ ಬಳಿ ಬಂದು ನಿಂತು ಒಳಗೆ ಬಿಡಿ ಎಂದು ಕೇಳಿದರು. ಅದಕ್ಕೆ ಇಂದು ಆಗಲ್ಲ, ಹೆಚ್ಚಿನ ಜನರಿದ್ದಾರೆ, ನಿಮ್ಮನ್ನು ಬಿಟ್ಟರೆ ಸಾಲಿನಲ್ಲಿ ನಿಂತ ಭಕ್ತರು ಗಲಾಟೆ ಮಾಡುತ್ತಾರೆ,ಹೀಗಾಗಿ ಸ್ವಲ್ಪ ಹೊತ್ತು ಕಾಯಿರಿ ಎಂದು ಪಿಎಸ್ಐ ಸವಿತಾ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಫ್ತಿಯಲ್ಲಿದ್ದ ಸರ್ಕಲ್ ಇನ್ಸ್ಪೆಕ್ಟರ್ ಲಕ್ಷ್ಮಿ ಅವರು ಗರ್ಭಗುಡಿಗೆ ತೆರಳಿದಾಗ, ಅದನ್ನು ಐಶ್ವರ್ಯ ಪ್ರಶ್ನಿಸಿದರು. ಆಗ ಅವರು ನಮ್ಮ ಸರ್ಕಲ್ ಇನ್ಸ್ಪೆಕ್ಟರ್, ಡ್ಯೂಟಿಯಲ್ಲಿದ್ದಾರೆ ಎಂದು ಸವಿತಾ ಸ್ಪಷ್ಟಪಡಿಸಿದರು.
ಇದರ ನಡುವೆ ನಾನು ಹೋಗಬೇಕು ಬಿಡಿ ಎಂದು ಐಶ್ವರ್ಯ ಪಟ್ಟು ಹಿಡಿದಿದ್ದಾರೆ ಆಗ ಇಬ್ಬರ ನಡುವೆ ವಾಗ್ವಾದ ನಡೆದು, ಕೊನೆಗೆ ಐಶ್ವರ್ಯ ಅವರು ಪಿಎಸ್ಐ ಸವಿತಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಮೋಕ್ಷ ಮಾಡಿದ್ದರು.
ಶ್ರೀರಂಗಪಟ್ಟಣ ತಾಲೂಕಿನ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಸವಿತಾ ಅವರು ನೀಡಿದ ದೂರಿನನ್ವಯ ಐಶ್ವರ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
