ನಂಜನಗೂಡು: ಗ್ರಂಥಾಲಯವು ಕೇವಲ ಪುಸ್ತಕಗಳನ್ನು ಸಂಗ್ರಹಿಸಿಡುವ ಸ್ಥಳವಲ್ಲ; ಅದು ವಿದ್ಯಾರ್ಥಿಗಳ ಜ್ಞಾನ, ಚಿಂತನೆ ಮತ್ತು ವ್ಯಕ್ತಿತ್ವವನ್ನು ರೂಪಿಸುವ ಪ್ರಮುಖ ಕೇಂದ್ರವಾಗಿದೆ ಎಂದು ಗ್ರಂಥಪಾಲಕಿ ಎಂ.ಎನ್. ಸುಲಕ್ಷಣ ನುಡಿದರು.
ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಾಲಯ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿರುವುದು ಕಂಡುಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂತಹ ಸಂದರ್ಭದಲ್ಲಿ ಗ್ರಂಥಾಲಯದ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆಗೆ ನೀಡುವ ಸಮಯದ ಒಂದು ಭಾಗವನ್ನಾದರೂ ಪುಸ್ತಕ ಓದುವುದಕ್ಕೆ ಮೀಸಲಿಡಬೇಕು ಎಂದು ಸುಲಕ್ಷಣ ಕರೆ ನೀಡಿದರು.
ಪ್ರತಿದಿನ ಒಂದು ಪುಟವಾದರೂ ಓದುವ ಅಭ್ಯಾಸ ಬೆಳೆಸಿಕೊಳ್ಳಿ. ಇಂದು ಓದಿದ ಒಂದು ಪುಟ ನಾಳೆ ನಿಮ್ಮ ಜ್ಞಾನವನ್ನು ಹೆಚ್ಚಿಸುವ ಒಂದು ಹೆಜ್ಜೆಯಾಗುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ಹಿರಿಯ ಉಪನ್ಯಾಸಕ ಎಸ್. ಲಿಂಗಣ್ಣ ಸ್ವಾಮಿ ಅವರು, ವಿದ್ಯಾರ್ಥಿ ಜೀವನದಲ್ಲಿ ಗ್ರಂಥಾಲಯದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಪರೀಕ್ಷೆಯ ಸಂದರ್ಭದಲ್ಲಿ ಮಾತ್ರ ಪುಸ್ತಕಗಳನ್ನು ಓದುವ ಬದಲು ಪ್ರತಿದಿನವೂ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪುಸ್ತಕಗಳು ಮೌನವಾಗಿದ್ದರೂ ಅವು ನಮ್ಮೊಂದಿಗೆ ಸಂವಾದ ನಡೆಸುತ್ತವೆ. ಒಳ್ಳೆಯ ಪುಸ್ತಕ ನಮ್ಮ ಆಲೋಚನೆಗಳನ್ನು ಬದಲಾಯಿಸುವುದಲ್ಲದೆ, ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿಯನ್ನು ಹೊಂದಿದೆ ಎಂದು ತಿಳಿಹೇಳಿದರು.
ಒಬ್ಬ ವಿದ್ಯಾರ್ಥಿಗೆ ಒಳ್ಳೆಯ ಸ್ನೇಹಿತ ಎಷ್ಟು ಅಗತ್ಯವೋ, ಅದಕ್ಕಿಂತಲೂ ಹೆಚ್ಚು ಒಳ್ಳೆಯ ಪುಸ್ತಕ ಅಗತ್ಯ. ಪುಸ್ತಕ ನಮ್ಮನ್ನು ಪ್ರಶ್ನಿಸುತ್ತದೆ, ಯೋಚಿಸುವಂತೆ ಮಾಡುತ್ತದೆ ಮತ್ತು ಸರಿಯಾದ ದಾರಿಯನ್ನು ತೋರಿಸುತ್ತದೆ ಎಂದು ಎಸ್. ಲಿಂಗಣ್ಣ ಸ್ವಾಮಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್. ದಿನೇಶ್ ಮಾತನಾಡಿ, ಗ್ರಂಥಾಲಯವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪ್ರಮುಖ ಸಂಪನ್ಮೂಲವಾಗಿದೆ ಎಂದು ಹೇಳಿದರು.
ಪುಸ್ತಕ ಓದುವ ವಿದ್ಯಾರ್ಥಿ ಕೇವಲ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದಷ್ಟೇ ಅಲ್ಲ, ಜೀವನದ ವಿವಿಧ ಸವಾಲುಗಳನ್ನು ಎದುರಿಸುವ ಜ್ಞಾನ ಮತ್ತು ವಿವೇಕವನ್ನು ಗಳಿಸುತ್ತಾನೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಭೇಟಿ ನೀಡುವುದನ್ನು ತಮ್ಮ ದಿನಚರಿಯ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು. ತಾವು ಓದಿದ ಪುಸ್ತಕದ ಕುರಿತು ಸ್ನೇಹಿತರೊಂದಿಗೆ ಚರ್ಚಿಸುವುದು, ಪುಸ್ತಕ ಪರಿಚಯ ಮಾಡಿಕೊಳ್ಳುವುದು ಹಾಗೂ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲವನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಾಂಶುಪಾಲರು ಕರೆ ನೀಡಿದರು.
ಗ್ರಂಥಾಲಯ ದಿನಾಚರಣೆಯಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸಲು ಸಹಕಾರಿಯಾಗುತ್ತವೆ. ಶಾಲಾ-ಕಾಲೇಜು ಜೀವನದಲ್ಲಿ ಬೆಳೆಸಿಕೊಂಡ ಓದುವ ಹವ್ಯಾಸ ಮುಂದಿನ ಜೀವನದಲ್ಲಿಯೂ ಜ್ಞಾನವರ್ಧನೆಗೆ ನೆರವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿದಿನ ಓದು, ಪ್ರತಿದಿನ ಕಲಿಯು, ಪ್ರತಿದಿನ ಬೆಳೆಯು” ಎಂಬ ಸಂಕಲ್ಪ ಮಾಡಬೇಕು ಎಂದು ಸಿ.ಆರ್.ದಿನೇಶ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಳೆದ ವರ್ಷಗಳಲ್ಲಿ ಗ್ರಂಥಾಲಯಕ್ಕೆ ಅತಿ ಹೆಚ್ಚು ಭೇಟಿ ನೀಡಿ ಪುಸ್ತಕಗಳನ್ನು ಎರವಲು ಪಡೆದ 20 ವಿದ್ಯಾರ್ಥಿಗಳಿಗೆ ಬಹುಮಾನದ ರೂಪದಲ್ಲಿ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ಉಪನ್ಯಾಸಕರಾದ ನಾಗರಾಜು,ಸ್ವಾಮಿ ಗೌಡ ,ಮಾಲತಿ ,ಭವ್ಯ ,ಮೀನಾ ,ಆದಿಲ್,ಸುಮಾ ರೂಪ ,ಸುಮಿತ್ರ ,ಟಿ ಕೆ ರವಿ, ನಾಗರಾಜ್ ರೆಡ್ಡಿ, ರಾಮಾನುಜಾ, ಗೋಪಾಲಕೃಷ್ಣ, ದಿನೇಶ್, ಹರೀಶ್,ವತ್ಸಲ ,ಪದ್ಮಾವತಿ ,
ಅಂಬಿಕಾ, ಶೃತಿ, ಬಿಂದು, ಬಸವಣ್ಣ, ನಟರಾಜ್, ನಾಗವೇಣಿ , ದೀಪಿಕಾ ,
ಭಾನುಪ್ರಿಯ, ರಾಘವೇಂದ್ರ, ಅವಿನಾಶ್ ಮಿಲ್ಟನ್ ,ಮಹದೇವಸ್ವಾಮಿ ನಿಂಗಯ್ಯ ಮತ್ತಿತರರು ಹಾಜರಿದ್ದರು.
