ಬೆಂಗಳೂರು: ಬೆಂಗಳೂರಿನ ತೀವ್ರ ಸಂಚಾರ ದಟ್ಟಣೆ ಮತ್ತು ವಾಹನ ನಿಲುಗಡೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು, ಗಂಟೆಗಳ ಲೆಕ್ಕದಲ್ಲಿ ವಾಹನ ಸವಾರರಿಂದ ಪಾರ್ಕಿಂಗ್ ಶುಲ್ಕ ವಸೂಲಿ ಮಾಡ ಹೊರಟಿರುವುದು ಖಂಡನೀಯ ಎಂದು ಆಪ್ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು,ಬೆಂಗಳೂರಿನ ಸಂಚಾರ ಸಮಸ್ಯೆ ಇಂದಿನದಲ್ಲ. ಇದಕ್ಕೆ ವೈಜ್ಞಾನಿಕ ನಗರ ಯೋಜನೆ, ಸಮರ್ಪಕ ಸಂಚಾರ ನಿರ್ವಹಣೆ ಮತ್ತು ಪರಿಣಾಮಕಾರಿ ಪಾರ್ಕಿಂಗ್ ವ್ಯವಸ್ಥೆ ಮೂಲಕ ಪರಿಹಾರ ಕಂಡುಕೊಳ್ಳಬಹುದೇ ಹೊರತು, ಜನರ ವಾಹನ ನಿಲ್ಲಿಸಿದ ಪ್ರತಿ ಗಂಟೆಗೂ ಹಣ ವಸೂಲಿ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಹೇಳಿದರು.
ಸಂಚಾರ ಸಮಸ್ಯೆಯನ್ನು ಬಗೆಹರಿಸುವ ಬದಲು, ಸಂಚಾರ ಸಮಸ್ಯೆಯನ್ನೇ ನೆಪ ಮಾಡಿಕೊಂಡು ಜನರ ಜೇಬಿಗೆ ಕನ್ನ ಹಾಕುವ ನೀತಿ ಇದು ಎಂದು ಡಾ. ಸತೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ನಿಜವಾಗಿಯೂ ಬೆಂಗಳೂರಿನ ಸಂಚಾರ ಸಮಸ್ಯೆ ಬಗೆಹರಿಸುವ ಕಾಳಜಿ ಇದ್ದರೆ, ಮೊದಲು ಸಮರ್ಥ ಹಾಗೂ ಅನುಭವ ಹೊಂದಿರುವ ನೂತನ ಟ್ರಾಫಿಕ್ ಕಮಿಷನರ್ರನ್ನು ನೇಮಿಸಲಿ. ಸಂಚಾರದ ಒತ್ತಡ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ, ಪೀಕ್ ಅವರ್ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಿ. ಅಗತ್ಯವಿರುವ ಕಡೆ ಹೆಚ್ಚಿನ ಗೃಹರಕ್ಷಕ ಸಿಬ್ಬಂದಿಯನ್ನು ನೇಮಿಸಿ, ಸಂಚಾರ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಿ ಎಂದು ಸಲಹೆ ನೀಡಿದರು.
ಸಿಗ್ನಲ್ಗಳ ವೈಜ್ಞಾನಿಕ ಮರುಹೊಂದಾಣಿಕೆ, ಒನ್ವೇ ವ್ಯವಸ್ಥೆಯ ಸುಧಾರಣೆ, ಪಾದಚಾರಿ ಮಾರ್ಗಗಳ ರಕ್ಷಣೆ, ಅಕ್ರಮ ಪಾರ್ಕಿಂಗ್ ನಿಯಂತ್ರಣ, ಸಾರ್ವಜನಿಕ ಸಾರಿಗೆಗೆ ಆದ್ಯತೆ ಹಾಗೂ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ, ಪಾರ್ಕಿಂಗ್ ನೀಡದಿರುವ ವಾಣಿಜ್ಯ ಬಹು ಮಹಡಿ ಕಟ್ಟಡಗಳ ಮೇಲೆ ಕಠಿಣ ಕ್ರಮ ಸೇರಿದಂತೆ ಹತ್ತಾರು ವೈಜ್ಞಾನಿಕ ಮಾರ್ಗಗಳಿವೆ ಎಂದು ಡಾ.ಸತೀಶ್ ಹೇಳಿದರು.
ಇಂತಹ ಕ್ರಮಗಳನ್ನು ಕೈಗೊಳ್ಳದೆ, ‘ವಾಹನ ನಿಲ್ಲಿಸಿದ್ದೀಯಾ ಹಣ ಕೊಡು; ಹೆಚ್ಚು ಹೊತ್ತು ನಿಲ್ಲಿಸಿದ್ದೀಯಾ? ಇನ್ನಷ್ಟು ಹಣ ಕೊಡು’ ಎಂಬ ರೀತಿಯಲ್ಲಿ ಗಂಟೆಗಳ ಲೆಕ್ಕದಲ್ಲಿ ಶುಲ್ಕ ವಿಧಿಸುವುದು , ಮನೆಗಳ ಮುಂದೆ ವಾಹನ ನಿಲ್ಲಿಸುವುದಕ್ಕೂ 25,000 ರೂ ವರೆಗೆ ಶುಲ್ಕದ ರೂಪದಲ್ಲಿ ದರೋಡೆಗೆ ಇಳಿದಿರುವುದು ಪರಿಹಾರವಲ್ಲ ಎಂದು ಟೀಕಿಸಿದರು.
ಇದು ಜನರ ಮೇಲಿನ ಮತ್ತೊಂದು ಆರ್ಥಿಕ ದೌರ್ಜನ್ಯ. ಸಂಚಾರ ದಟ್ಟಣೆಯಿಂದ ಈಗಾಗಲೇ ಗಂಟೆಗಟ್ಟಲೆ ರಸ್ತೆಯಲ್ಲಿ ಸಿಲುಕುವ ಜನರ ಸಮಯ, ಇಂಧನ ಮತ್ತು ಆದಾಯ ನಷ್ಟವಾಗುತ್ತಿದೆ. ಅದರ ಮೇಲೆ ಪಾರ್ಕಿಂಗ್ ಹೆಸರಿನಲ್ಲಿ ಮತ್ತೊಂದು ಸುಲಿಗೆ ಮಾಡುವುದು ಜನರ ಬದುಕಿನ ಮೇಲೆಯೇ ಹೊರೆ ಹಾಕಿದಂತಾಗಿದೆ ಎಂದು ಡಾ. ಸತೀಶ್ ಕುಮಾರ್ ಕಿಡಿಕಾರಿದರು.
ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಮಾತನಾಡಿ “ಸರ್ಕಾರಕ್ಕೆ ಹಣಬೇಕೆಂದರೆ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಸರ್ಕಾರದ ನಾಯಕರು ಜನರ ಮುಂದೆ ಭಿಕ್ಷಾಪಾತ್ರೆ ಹಿಡಿದು ನಿಲ್ಲುವುದು ಮೇಲು. ಕನಿಷ್ಠ ಅದರಿಂದ ‘ಜನಸೇವೆ’ ಹೆಸರಿನಲ್ಲಿ ಜನರ ಜೇಬಿಗೆ ಕನ್ನ ಹಾಕುವ ಕೆಲಸವಾದರೂ ನಿಲ್ಲುತ್ತದೆ ಎಂದು ವ್ಯಂಗ್ಯವಾಡಿದರು.
ಸರ್ಕಾರ ತಕ್ಷಣ ಈ ನೀತಿಯನ್ನು ಮರುಪರಿಶೀಲಿಸಿ, ಶುಲ್ಕದ ಸುಲಿಗೆಯನ್ನು ಕೈಬಿಟ್ಟು ವೈಜ್ಞಾನಿಕ ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು. ಇಲ್ಲವಾದರೆ ಜನರ ಪರವಾಗಿ ಆಮ್ ಆದ್ಮಿ ಪಕ್ಷ ತೀವ್ರ ಹೋರಾಟ ನಡೆಸಲಿದೆ ಎಂದು ಜಗದೀಶ್ ಚಂದ್ರ ಎಚ್ಚರಿಸಿದರು.
