ಮೈಸೂರು: ಜಿಲ್ಲೆಯ ಸರಗೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಟಕೊಡುತ್ತಿದ್ದ ಚಿರತೆ ಕಡಗೂ ಸೆರೆ ಸಿಕ್ಕಿದ್ದು,ಜನ ನಿಟ್ಟುಸಿರು ಬಿಟ್ಟಿದ್ದಾರೆ.
ಸರಗೂರು ತಾಲ್ಲೂಕಿನ ಎನ್.ಬೆಳತ್ತೂರು ಹಳೆ ಗೇಟ್ ಬಳಿ ರೈತ ಯೋಗೇಶ್ ಎಂಬವರ ಜಮೀನಿನ ಬಳಿ ಅರಣ್ಯ ಇಲಾಖೆ ಇರಿಸಿದ ಬೋನಿನಲ್ಲಿ ನಾಲ್ಕು ವರ್ಷದ ಗಂಡು ಚಿರತೆ ಸೆರೆಯಾಗಿದೆ.
ಕಳೆದ 20 ದಿನಗಳ ಹಿಂದೆ ಅರಣ್ಯ ಇಲಾಖೆಯವರು ಚಿರತೆ ಸೆರೆ ಹಿಡಿಯಲು ಬೋನನ್ನು ಇರಿಸಿದ್ದರು. ತಡರಾತ್ರಿ ಬೋನಿಗೆ ಭಾರೀ ಗಾತ್ರದ ಗಂಡು ಚಿರತೆ ಸೆರೆಯಾಗಿದೆ.
ಎನ್.ಬೆಳ್ಳತ್ತೂರು ಹಳೆ ಗೇಟ್ ಸಮೀಪ ಇರುವ ಜಮೀನುಗಳಲ್ಲಿ ಹಲವಾರು ತಿಂಗಳಿಂದ ಚಿರತೆ, ಹಸುಗಳ ಮೇಲೆ ದಾಳಿ ಮಾಡಿ ಸುಮಾರು 37 ಹಸುಗಳನ್ನು ಕೊಂದು ಹಾಕಿತ್ತು.
ಈ ಸಂಬಂಧ ರೈತರು ಚಿರತೆ ಸೆರೆ ಹಿಡಿಯಬೇಕೆಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಬೋನು ಇರಿಸಿದ್ದರು.
ಸೆರೆಯಾದ ಚಿರತೆಗೆ ಡಾ.ರಮೇಶ್ ಅವರು ಅರಿವಳಿಕೆ ನೀಡಿ, ರೇಡಿಯೊ ಕಾಲರ್ ಅಳವಡಿಸಿ, ಅರಣ್ಯಕ್ಕೆ ಬಿಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಎಸಿಎಫ್ ಮಧು, ಆರ್ಎಫ್ಒ ಸಿದ್ದರಾಜು, ಚಿರತೆ ಕಾರ್ಯಪಡೆ ಸಿಬ್ಬಂದಿ ಮತ್ತು ಅರಣ್ಯ ಸಿಬ್ಬಂದಿ ಹಾಜರಿದ್ದರು.
