ಮೈಸೂರು: ವಿಶ್ವಪ್ರಸಿದ್ಧ ದಸರಾ ಮಹೋತ್ಸವ ಹಾಗೂ ನವರಾತ್ರಿ ಪ್ರಯುಕ್ತ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಮುಂಜಾನೆ ಅರಮನೆಯ ಕಲ್ಯಾಣ ಮಂಟಪದ ಬಳಿ ಪವಿತ್ರವಾದ ಚಂಡಿಕಾ ಹೋಮ ಮತ್ತು ಪೂರ್ಣಾಹುತಿ ನೆರವೇರಿತು.
ನಂತರ, ಅರಮನೆಯ ಖಾಸಾ ಆಯುಧಗಳಾದ ಕತ್ತಿ, ಈಟಿ, ಗುರಾಣಿ ಮತ್ತಿತರ ಆಯುಧಗಳನ್ನು ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಕೊಂಡೊಯ್ದು ಸಾಂಪ್ರದಾಯಿಕವಾಗಿ ಸ್ವಚ್ಛಗೊಳಿಸಿ, ತೈಲಾಭಿಷೇಕ ಮಾಡಲಾಯಿತು.
ದೇವಸ್ಥಾನದಿಂದ ವಾಪಸ್ ತರಲಾದ ರಾಜಮನೆತನದ ಐತಿಹಾಸಿಕ ಆಯುಧಗಳಿಗೆ ಹಾಗೂ ಪಟ್ಟದ ಕತ್ತಿಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶುಭ ಮುಹೂರ್ತದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಅರಮನೆಯ ಸವಾರಿ ತೊಟ್ಟಿ’ಯಲ್ಲಿ ರಾಜಮನೆತನದ ಹೆಮ್ಮೆಯ ಸಂಕೇತಗಳಾದ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಮತ್ತು ಪಟ್ಟದ ಒಂಟೆಗಳಿಗೆ ಮಂತ್ರಘೋಷಗಳೊಂದಿಗೆ ವಿಶೇಷ ಪೂಜೆಯನ್ನು ಯದುವೀರ್ ಮಾಡಿದರು.
ಇದೇ ವೇಳೆ ಒಡೆಯರ್ ಮನೆತನದವರು ಬಳಸುವ ಐತಿಹಾಸಿಕ ಹಾಗೂ ಆಧುನಿಕ ಐಷಾರಾಮಿ ಕಾರುಗಳು (ರೋಲ್ಸ್ ರಾಯ್ಸ್, ಬೆಂಟ್ಲಿ ಇತ್ಯಾದಿ) ಹಾಗೂ ಅರಮನೆಯ ಪಿರಂಗಿ ಗಾಡಿಗಳಿಗೆ ಹೂವಿನ ಹಾರ ಹಾಕಿ ಸಂಪ್ರದಾಯದಂತೆ ಪೂಜೆ ನೆರವೇರಿಸಿದರು.
