ಬೆಂಗಳೂರು: ಪ್ರತಿ ದಿವಸ ರಾಜ್ಯದ ಪ್ರಮುಖ ದಿನಪತ್ರಿಕೆಗಳ ಮುಖಪುಟಗಳಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯ ಕುರಿತಾಗಿಯೇ ಪ್ರಕಟಗೊಳ್ಳುತ್ತಿರುವ ಜಾಹೀರಾತಿನಲ್ಲಿ ಗಾಂಧೀಜಿಯವರನ್ನು ಹಿಂಸಾವಾದಿಯ ರೂಪದಲ್ಲಿ ಬಿಂಬಿಸಿರುವುದು ಅಕ್ಷಮ್ಯ ಅಪರಾಧ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ಮನಸೋ ಇಚ್ಛೆ ಮಹಾತ್ಮ ಗಾಂಧೀಜಿಯವರನ್ನೇ ಬಂಡವಾಳ ಮಾಡಿಕೊಂಡು ರಾಜ್ಯದ ಜನತೆಯ ದಿಕ್ಕು ತಪ್ಪಿಸುತ್ತಿರುವ ಪರಿಯನ್ನು ನೋಡಿದಾಗ ಎರಡು ಪಕ್ಷಗಳು ಬೌದ್ಧಿಕ ದಿವಾಳಿಯ ಹಂತಕ್ಕೆ ತಲುಪಿವೆ ಎಂದು ಕಿಡಿಕಾರಿದ್ದಾರೆ.
ಒಂದು ಕಡೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಜನತೆಯ ತೆರಿಗೆ ಹಣಕ್ಕೆ ಬೆಲೆಯನ್ನೇ ನೀಡದೆ ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಎದ್ದು ಕಾಣುತ್ತಿದೆ.
ಮತ್ತೊಂದು ಕಡೆ ವಿರೋಧಪಕ್ಷವಾದ ಬಿಜೆಪಿಯು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ತನ್ನ ಚುನಾವಣಾ ನಿಧಿಗಾಗಿ ವಸೂಲಿ ಮಾಡಿರುವ ಹಣವನ್ನು ಇಂತಹ ದುರುದ್ದೇಶಗಳಿಗೆ ಬಳಸಿಕೊಳ್ಳುತ್ತಿರುವುದು ಸಂಪೂರ್ಣವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ಎಂದು ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದರು.
ಜೀವನಪೂರ್ತಿ ಅಹಿಂಸಾ ತತ್ವದಿಂದಲೇ ರಾಷ್ಟ್ರಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟು ವಿಶ್ವ ಮಾನವನಾಗಿ ಹುತಾತ್ಮರಾಗಿರುವ ಮಹಾತ್ಮ ಗಾಂಧೀಜಿಯವರ ಹೆಸರಿಗೆ ಮಸಿ ಬಳಿಯುವ ರೀತಿಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿಗರು ತಮ್ಮ ಜಾಹೀರಾತಿನಲ್ಲಿ ಬಡಿಗೋಲನ್ನು ತೆಗೆದುಕೊಂಡು ಹೊಡೆಯುವ ರೀತಿಯಲ್ಲಿ ಅತ್ಯಂತ ಧಾರುಣವಾಗಿ ಮಹಾತ್ಮರನ್ನು ಬಿಂಬಿಸಿರುವುದು ನಿಜಕ್ಕೂ ಆಘಾತಕಾರಿಯಾಗಿದೆ.
ತಮ್ಮ ಜೀವಮಾನ ಪೂರ್ತಿ ಯಾರಿಗೂ ಸಹ ಮನ ನೋಯಿಸದೆ , ಅಹಿಂಸಾ ತತ್ವದಿಂದಲೇ ಸ್ವಾತಂತ್ರ್ಯ ಚಳವಳಿಯನ್ನು ನಡೆಸುತ್ತಿದ್ದ ಗಾಂಧೀಜಿಯವರು ಇಂದು ಬಡಿಗೋಲನ್ನು ತೆಗೆದುಕೊಂಡು ಹೊಡೆಯುವಂತಹ ಹಿಂಸಾತ್ಮಕ ಚಿತ್ರಗಳನ್ನು ಬಿಜೆಪಿಗರು ಸಾರ್ವಜನಿಕರಿಗೆ ತಮ್ಮ ಜಾಹೀರಾತಿನ ಮೂಲಕ ಪ್ರದರ್ಶಿಸುತ್ತಿದ್ದಾರೆ. ಇದು ಮಹಾತ್ಮರಿಗೆ ನೀಡುವಂತಹ ಗೌರವವಲ್ಲ ಎಂದು ಮುಖ್ಯ ಮಂತ್ರಿ ಚಂದ್ರು ಹೇಳಿದ್ದಾರೆ.
ಕೂಡಲೇ ಬಿಜೆಪಿಯ ಉನ್ನತ ನಾಯಕರು ಈ ಬಗ್ಗೆ ಕ್ಷಮೆಯಾಚಿಸಬೇಕು ಹಾಗೂ ಮಹಾತ್ಮರನ್ನು ಹಿಂಸಾವಾದಿಗಳ ರೀತಿಯಲ್ಲಿ ಬಿಂಬಿಸುವ ಪ್ರಯತ್ನಗಳನ್ನು ಕೈ ಬಿಡಬೇಕು ಇಲ್ಲದಿದ್ದಲ್ಲಿ ರಾಜ್ಯದ ಜನತೆ ಎಂದಿಗೂ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದ್ದಾರೆ.
