ಬೆಂಗಳೂರು: ಖಾಸಗಿ ವಾಹಿನಿಯ ಮುಖ್ಯಸ್ಥ ತಮ್ಮ ಬಗ್ಗೆ ಕಪೋಲ ಕಲ್ಪಿತ ಸುಳ್ಳು ಪ್ರಚಾರ ಮಾಡುತ್ತಿದ್ದಾರೆಂದು ಜೆಡಿಎಸ್ ಪಕ್ಷದ ನಾಯಕಿ ಹಾಗೂ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪವಿತ್ರ ನವರಾತ್ರಿಯ ದಿವ್ಯ ದಿನಗಳಲ್ಲಿ ಖಾಸಗಿ ಸುದ್ದಿ ವಾಹಿನಿಯೊಂದರ ಮುಖ್ಯಸ್ಥರು ನನ್ನ ವಿರುದ್ಧ ಮಾಡಿರುವ ಆರೋಪಗಳು ಸಂಪೂರ್ಣ ಸತ್ಯಕ್ಕೆ ದೂರವಾದದ್ದು,ಎಲ್ಲವೂ ಕಟ್ಟುಕಥೆ ಮತ್ತು ದುರುದ್ದೇಶಪೂರಿತ ಸೃಷ್ಟಿ ಎಂದು ತಿಳಿಸಿದ್ದಾರೆ.
ದೀರ್ಘ ಕಾಲದಿಂದ ಸಾರ್ವಜನಿಕ ಜೀವನದಲ್ಲಿರುವ ನನ್ನ ಕಳಂಕರಹಿತ ಚಾರಿತ್ರ್ಯಕ್ಕೆ ಧಕ್ಕೆ ತರಲು ಧರ್ಮ ಮತ್ತು ಸತ್ಯದ ಹಬ್ಬವಾದ ನವರಾತ್ರಿಯ ಸಂದರ್ಭದಲ್ಲೇ ಇಂತಹ ತೀರಾ ಕೀಳುಮಟ್ಟದ, ದುರುದ್ದೇಶ ಪ್ರೇರಿತ ನಿಂದನೆಗಿಳಿದಿರುವುದಕ್ಕೆ ನನ್ನ ಧಿಕ್ಕಾರವಿದೆ. ಸತ್ಯವನ್ನು ಎಂದಿಗೂ ಮುಚ್ಚಿಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಈ ರೀತಿಯ ಚಾರಿತ್ರ್ಯ ವಧೆ ಹಾಗೂ ಕಲ್ಪಿತ ಸಂಚಿನ ಹಿಂದೆ ಇರುವ ಸೂತ್ರಧಾರರಿಗೂ ಮತ್ತು ಅದನ್ನು ಕಾರ್ಯರೂಪಕ್ಕೆ ತಂದವರಿಗೂ ಆ ಜಗನ್ಮಾತೆ ದುರ್ಗಾದೇವಿ ತಕ್ಕ ಶಾಸ್ತಿ ಮಾಡಲಿದ್ದಾಳೆ. ಈ ಅಧರ್ಮಕ್ಕೆ ತಾಯಿ ದುರ್ಗೆಯ ದಂಡನೆಯೇ ಅಂತಿಮ ಉತ್ತರ ಎಂದು ಅನಿತಾ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
