ಮೈಸೂರು: ಕಬಿನಿ ಭರ್ತಿಯಾಗಿದ್ದರೂ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳಿಗೆ ನೀರು ಕೊಡದೆ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುವ ಮೂಲಕ ‘ನೀರಗಂಟಿ’ ಕೆಲಸ ಮಾಡುತ್ತಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಕಿಡಿಕಾರಿದರು.
ಮೈಸೂರು ತಾಲೂಕಿನ ಮಾರ್ಬಳ್ಳಿ ಗ್ರಾಮದಲ್ಲಿ ನೂತನ ರೈತ ಸಂಘದ ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ವಲಯ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಬೆಂಬಲ ಬೆಲೆ ಕೊರತೆ, ಬ್ಯಾಂಕುಗಳ ಕಠಿಣ ಸಾಲ ನೀತಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ರೈತರಿಗೆ ಆಗುತ್ತಿರುವ ಕಿರುಕುಳದ ವಿರುದ್ಧ ಹೋರಾಡಲು ಗ್ರಾಮ ಘಟಕ ಆರಂಭಿಸಲಾಗಿದೆ ಎಂದು ತಿಳಿಸಿದರು.
ರೈತ ಸಂಘಟನೆಗಳಲ್ಲಿನ ಒಡಕೇ ಸರ್ಕಾರಗಳ ನಿರ್ಲಕ್ಷ್ಯಕ್ಕೆ ಕಾರಣ. ಜಾತಿ, ಪಕ್ಷ ಮರೆತು ರೈತ ಸಮುದಾಯದ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕುರುಬೂರು ಶಾಂತಕುಮಾರ್ ಕರೆ ನೀಡಿದರು.
ಈ ವೇಳೆ ಕೃಷಿ ಸೌಲಭ್ಯಗಳು, ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಉಪಾಧ್ಯಕ್ಷ ನೀಲಕಂಠಪ್ಪ, ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ತಾಲೂಕು ಅಧ್ಯಕ್ಷ ಪೈಲ್ವಾನ್ ವೆಂಕಟೇಶ್, ಜಿಲ್ಲಾ ಕಾರ್ಯದರ್ಶಿ ವರಕೋಡು ನಾಗೇಶ್ ಸೇರಿದಂತೆ ಹಲವಾರು ರೈತ ಮುಖಂಡರು ಹಾಜರಿದ್ದರು.
