ಮೈಸೂರು: ಸಾರ್ವಜನಿಕರಿಗೆ ವಿಶ್ರಾಂತಿಯ ತಾಣವಾಗಬೇಕಿದ್ದ ರಾಮಕೃಷ್ಣ ನಗರದ ನಂದನವನ ಈಗ ಪುಂಡುಪೋಕರಿಗಳ, ಅನೈತಿಕ ಚಟುವಟಿಕೆಗಳ ವನವಾಗಿದೆ
ನಗರದ ಪ್ರತಿಷ್ಠಿತ ಬಡಾವಣೆ ರಾಮಕೃಷ್ಣ ನಗರ ಎ ಮತ್ತು ಬಿ ಬ್ಲಾಕ್ ನಡುವಿನ ವಿಶ್ವಮಾನವ ಜೋಡಿ ರಸ್ತೆಗೆ ಹೊಂದಿಕೊಂಡಿರುವ ನಂದನವನ ಉದ್ಯಾನವನ ನಿರ್ವಹಣೆ ಇಲ್ಲದೆ ಪುಂಡರ ತಾಣವಾಗಿಬಿಟ್ಟಿದೆ
ಕಸ, ಗಿಡಗಂಟಿಗಳಿಂದ ತುಂಬಿ ವಿಷ ಜಂತುಗಳ ವಾಸಸ್ಥಾನವಾಗಿದೆ. ಪಕ್ಕದ ರಸ್ತೆಯಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಆರಂಭವಾದ ಬಳಿಕ ಅಲ್ಲಿಗೆ ಬರುವವರ ಕಾರುಗಳ ಸಾಲು ತಡೆಗೋಡೆಯಾಗಿದೆ ಅದರ ಮರೆಯಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ಗಬ್ಬು ವಾಸನೆ ಹರಡಿದೆ.
ಸಂಜೆಯಾಗುತ್ತಿದ್ದಂತೆ ಧೂಮಪಾನ, ಮದ್ಯಪಾನ ಮಾಡುವ ಪುಂಡರು ಹೆಚ್ಚಾಗುತ್ತಾರೆ, ಅನೈತಿಕ ಚಟುವಟಿಕೆಗಳು ಹೆಚ್ಚಾಗುತ್ತವೆ.ಇದನ್ನೇನಾದರೂ ಪ್ರಶ್ನಿಸಿದರೆ ಅವರಿಗೇ ಬೆದರಿಕೆ ಹಾಕುತ್ತಾರೆ.ಇದರಿಂದಾಗಿ ಸ್ಥಳೀಯ ನಿವಾಸಿಗಳಿಗೆ ಬಹಳ ತೊಂದರೆಯಾಗುತ್ತಿದೆ.
ಕೂಡಲೇ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು, ಅವ್ಯವಸ್ಥೆಯ ಗೂಡಾಗಿರುವ ಈ ಉದ್ಯಾನವನವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ವಾಯು ವಿಹಾರಕ್ಕೆ ಅನುವು ಮಾಡಿಕೊಡಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
