ಮೈಸೂರು: ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಅಗಾಧ ಜ್ಞಾನ, ಶಿಸ್ತು ಮತ್ತು ಪ್ರಸ್ತುತ ವಿದ್ಯಮಾನಗಳಿಗೆ ನಮ್ಮನ್ನು ನಾವು ಹೊಂದಿಸಿಕೊಳ್ಳುವ ಮನೋಭಾವ ಅಗತ್ಯ ಎಂದು ಮೈಸೂರು ವಿವಿ ಆಡಳಿತ ವಿಭಾಗದ ಕುಲಸಚಿವರಾದ ಸವಿತಾ ಎಂ ಕೆ ಅವರು ತಿಳಿಸಿದರು.
ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತು ಕಾಲೇಜು ಶಿಕ್ಷಣ ಇಲಾಖೆ ಮತ್ತು ಮೈಸೂರು ವಲಯದ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ರೂಸಾ ಪ್ರಾಯೋಜಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಧ್ಯಾಪಕರಿಗೆ ನೀಡಲಾಗುತ್ತಿರುವ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದ ನಿರ್ಮಾಣದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಪಾತ್ರ ಹಿರಿದು. ಸರ್ಕಾರಿ ಕಾಲೇಜುಗಳಿಗೆ ಸೇರುವುದು ಗ್ರಾಮೀಣ ಹಿನ್ನೆಲೆಯ ಮಕ್ಕಳು. ಅವರಿಗೆ ಸೂಕ್ತ ಮಾರ್ಗದರ್ಶನ ಮೌಲ್ಯಯುತ ಶಿಕ್ಷಣ ಒದಗಿಸುವುದರ ಜೊತೆಗೆ ಉದ್ಯೋಗಾವಕಾಶ ಸೃಷ್ಟಿಸುವುದು ಶಿಕ್ಷಣದ ಗುರಿ,ಪ್ರಾಧ್ಯಾಪಕರಲ್ಲಿ ಶಿಸ್ತು ಮತ್ತು ಬದ್ಧತೆ ಅತ್ಯಗತ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ವಲಯದ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಾದ ಡಾ. ಪ್ರತಿಮಾ ಡಿ.ಎಸ್ ಅವರು ಮಾತನಾಡಿ, ಸಮಾಜದಲ್ಲಿ ಸರ್ಕಾರಿ ಕಾಲೇಜುಗಳ ಕುರಿತು ಮೂಡಿರುವ ಋಣಾತ್ಮಕ ಭಾವನೆಯನ್ನು ಬದಲಿಸುವ ಜವಾಬ್ದಾರಿ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮೆಲ್ಲರ ಮೇಲಿದೆ, ಪರಿಣಾಮಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಪರಿಪೂರ್ಣ ವಿದ್ಯಾರ್ಥಿಗಳು ಸೃಷ್ಟಿಯಾಗಬೇಕು ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಬಿಐಎಂಎಸ್ ನ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಆನಂದ್ ಡಿ ಮತ್ತು ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಪವಿತ್ರ ಆರ್ ಎಚ್ ಅವರು ತರಬೇತಿ ನೀಡಿದರು.
ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಪಾಲರಾದ ಡಾ. ನಟರಾಜ್ ಸಿ ಮೈಸೂರು ವಲಯದ ಜಂಟಿ ನಿರ್ದೇಶಕರ ಕಚೇರಿಯ ಸಹಾಯಕ ನಿರ್ದೇಶಕರಾದ ಎ ಬಿ ನಾಗೇಂದ್ರ ಪ್ರಸಾದ್, ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪಾತ್ರಾಂಕಿತ ವ್ಯವಸ್ಥಾಪಕರಾದ ಲಲಿತ ಕುಮಾರಿ ಉಪಸ್ಥಿತರಿದ್ದರು.
ತರಬೇತಿಯ ಸಂಯೋಜಕರು ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಗ್ರಂಥಪಾಲಕರು ಹಾಗೂ ಆಯ್ಕೆ ಸಂಯೋಜಕರಾದ ಡಾ. ಮುತ್ತುರಾಜ್ ಎಸ್ ಅವರು ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು.
