ಹುಣಸೂರು: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಹುಣಸೂರಿನ ರತ್ನಪುರಿ ಕೊಯಮತ್ತೂರು ಕಾಲೋನಿ, ಉದ್ದೂರು ಹೊನ್ನಿಕುಪ್ಪೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಇದೆ 15ರಂದು ವಿಶೇಷವಾಗಿ ಶಿವನ ಆರಾಧನೆಯನ್ನು ಹಮ್ಮಿಕೊಂಡಿದ್ದಾರೆ.
ಹೊನ್ನಿ ಕುಪ್ಪೆ ಸಮೀಪದ ಗದ್ದೆ ಬಯಲಿನಲ್ಲಿರುವ ಶ್ರೀ ಅರಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ 21ನೇ ವರ್ಷದ ಮಹಾಶಿವರಾತ್ರಿ ಹಬ್ಬವನ್ನು ವಿಶೇಷ ಪೂಜಾ ಕಾರ್ಯಗಳಿಂದ ನೆರವೇರಿಸಲಾಗುತ್ತದೆ.
ಅಂದು ಸಂಜೆ ಆರು ಗಂಟೆಗೆ 101 ಹರವಿ ಗಂಗೆ ಪೂಜೆ, ರಾತ್ರಿ 9 ಗಂಟೆಗೆ ಗಣಪತಿ ಹೋಮ, 10 ಗಂಟೆಗೆ ನವಗ್ರಹ ಹೋಮ,11 ಗಂಟೆಗೆ ರುದ್ರಾಭಿಷೇಕ, ರುದ್ರ ಹೋಮ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ.
ಇಡೀ ದಿನ ಪೂಜಾ ಕಾರ್ಯಗಳು ನೆರವೇರಿದ ನಂತರ ರಾತ್ರಿ ಜಾಗರಣೆ ಮಾಡಲಾಗುತ್ತದೆ ಹಾಗೂ ಎಲ್ಲಾ ಗ್ರಾಮಗಳ ಮುಖಂಡರು ಜನರು ಜಾತ್ರಾ ಮಹೋತ್ಸವವನ್ನು ಹಮ್ಮಿಕೊಂಡಿದ್ದಾರೆ.
ನಂತರ ಸೋಮವಾರ ಮುಂಜಾನೆ 5 ಗಂಟೆಗೆ ಶಿವನಿಗೆ ಹೂವಿನ ಅಲಂಕಾರ ನಂತರ ಶಿವ ಅಷ್ಟೋತ್ತರ ನೆರವೇರಲಿದೆ. 7 ಗಂಟೆಗೆ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಮತ್ತು ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲ್ಲೂಕು ಅಧ್ಯಕ್ಷ ಚೆಲುವರಾಜು ತಿಳಿಸಿದ್ದಾರೆ.
ಈ ಅರಕೇಶ್ವರ ಸ್ವಾಮಿ ದೇವಾಲಯವು ಹಿಂದೆ ಮಹಾರಾಜರ ಆಳ್ವಿಕೆಯಲ್ಲಿ ಕಟ್ಟಿದ್ದೆಂದು ಹಿರಿಯರು ಹೇಳುತ್ತಾರೆ. ಆಗಿನಿಂದಲೂ ಅಂದರೆ ಶತಮಾನದ ಇತಿಹಾಸ ಇರುವ ಈ ದೇವಾಲಯದಲ್ಲಿ ಊರಿನ ಹಿರಿಯರು ಮಹಾಶಿವರಾತ್ರಿ ಹಬ್ಬದ ದಿನ ವಿಶೇಷ ಪೂಜೆ, ಜಾತ್ರೆ ಅನ್ನಸಂತರ್ಪಣೆಯನ್ನು ಹಮ್ಮಿಕೊಂಡು ಬರುತ್ತಿರುವುದು ವಿಶೇಷ. ಅದನ್ನು ಈಗಿನವರು ಕೂಡ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
