ಮಂಡ್ಯ: ಯೋಗದ ಮೂಲಕ ಭಾರತವು ಇಡೀ ಜಗತ್ತನ್ನು ಬೆಸೆದಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಮಂಡ್ಯದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅವಿರತ ಪ್ರಯತ್ನದಿಂದಾಗಿ, ವಿಶ್ವಸಂಸ್ಥೆಯು 2014 ಜೂನ್ 21ರ ದಿನವನ್ನು ‘ಅಂತಾರರಾಷ್ಟ್ರೀಯ ಯೋಗ ದಿನ’ವೆಂದು ಘೋಷಿಸಿತು. ಅಂದಿನಿಂದ ಇಂದಿನವರೆಗೆ ಯೋಗವು ಕೇವಲ ಭಾರತಕ್ಕೆ ಸೀಮಿತವಾಗಿರದೆ, ಇಡೀ ವಿಶ್ವದ ಆರೋಗ್ಯ ಮತ್ತು ಶಾಂತಿಯ ಶ್ರೇಷ್ಠ ಮಾರ್ಗವಾಗಿ ಬೆಳೆದಿದೆ ಎಂದು ಹೇಳಿದರು.
ನರೇಂದ್ರ ಮೋದಿ ಅವರು ಬಹಳ ಆದ್ಯತೆಯ ಮೇರೆಗೆ ಕೇಂದ್ರ ಸರ್ಕಾರದಲ್ಲಿ ಆಯುಷ್ ಸಚಿವಾಲಯವನ್ನು ಸ್ಥಾಪಿಸಿದರು. ನಮ್ಮ ಸರ್ಕಾರದ ನಿರಂತರ ಪ್ರಯತ್ನಗಳಿಂದ ಯೋಗವು ಇಂದು ಜನಸಾಮಾನ್ಯರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ. ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ದೈನಂದಿನ ಒತ್ತಡವನ್ನು ನಿವಾರಿಸುತ್ತವೆ. ನಮ್ಮ ಭೂಮಿಯ ಸಂದೇಶವಾದ ‘ವಸುಧೈವ ಕುಟುಂಬಕಮ್’ (ವಿಶ್ವವೇ ಒಂದು ಕುಟುಂಬ) ಎಂಬ ತತ್ವಕ್ಕೆ ಯೋಗವು ಅತ್ಯುತ್ತಮ ಉದಾಹರಣೆಯಾಗಿದೆ. ಇದು ಜಾತಿ, ಧರ್ಮ, ಭಾಷೆ ಮತ್ತು ಗಡಿಗಳನ್ನು ಮೀರಿ ಇಡೀ ಮಾನವಕುಲವನ್ನು ಒಗ್ಗೂಡಿಸುತ್ತಿದೆ ಎಂದು ಕುಮಾರಸ್ವಾಮಿ ನುಡಿದರು.
ನಮ್ಮ ಸರ್ಕಾರವು ಯೋಗ ಮತ್ತು ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಗಳನ್ನು ಪ್ರಪಂಚದಾದ್ಯಂತ ಪಸರಿಸಲು ಬದ್ಧವಾಗಿದೆ. ಯೋಗವನ್ನು ಜನಸಾಮಾನ್ಯರಿಗೆ ತಲುಪಿಸಲು ಮತ್ತು ಎಲ್ಲರಿಗೂ ಕೈಗೆಟುಕುವ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ ಎಂದು ಕೇಂದ್ರ ಸಚಿವರು ಹೇಳಿದರು.
ಇಂದಿನ ಆಧುನಿಕ ಯುಗದಲ್ಲಿ ಹೆಚ್ಚುತ್ತಿರುವ ಒತ್ತಡ ಮತ್ತು ಬದಲಾದ ಜೀವನಶೈಲಿಯಿಂದಾಗಿ ವಯಸ್ಸಾದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಯೋಗವು ಯಾವುದೇ ವಯಸ್ಸಿನವರಿಗೂ ಸೂಕ್ತವಾದ ಅಭ್ಯಾಸವಾಗಿದೆ.ಯೋಗ ಹಿರಿಯ ನಾಗರಿಕರಿಗೆ ಸಕ್ರಿಯವಾಗಿರಲು, ಸ್ವಾವಲಂಬಿಗಳಾಗಿರಲು ಮತ್ತು ದೈಹಿಕವಾಗಿ ಸದೃಢವಾಗಿರಲು ಅತ್ಯಂತ ಸಹಕಾರಿಯಾಗಿದೆ ಎಂದರು ಅವರು.
ಕಾರ್ಯಕ್ರಮದಲ್ಲಿ ಸಚಿವ ಕುಮಾರಸ್ವಾಮಿ ಅವರು ಗುರುಗಳ ಮಾರ್ಗದರ್ಶನದಲ್ಲಿ ಯೋಗಭ್ಯಾಸ ಮಾಡಿದರು.
ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಂಡ್ಯದ ಶಾಲಾ-ಕಾಲೇಜಿನ ಮಕ್ಕಳು, ಸಾರ್ವಜನಿಕರು, ಜಿಲ್ಲಾಡಳಿತದ ಅಧಿಕಾರಿಗಳು ಯೋಗಾಭ್ಯಾಸ ಮಾಡಿದರು.
