ನವದೆಹಲಿ: ದೆಹಲಿಯಲ್ಲಿ ನಿರ್ಭಯ ಮಾದರಿ ಮತ್ತೊಂದು ಪೈಶಾಚಿಕ ಕೃತ್ಯವೊಂದು ತಡವಾಗಿ ಬೆಳಕಿಗೆ ಬಂದಿದೆ.
ಡ್ರಾಪ್ ನೀಡುವುದಾಗಿ ನಂಬಿಸಿ 16 ವರ್ಷದ ಬಾಲಕಿಯನ್ನು ಬಸ್ಗೆ ಹತ್ತಿಸಿಕೊಂಡು ಬಸ್ನ ಕಿಟಕಿಯ ಕರ್ಟನ್ ಗಳನ್ನು ಮುಚ್ಚಿ ಡ್ರೈವರ್ ಮತ್ತು ಕಂಡಕ್ಟರ್ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ದೆಹಲಿಯ ಕಾಶ್ಮೀರಿ ಗೇಟ್ ಪ್ರದೇಶದ ಬಳಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಹಾಗೂ ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ.
ಮನೆಯಲ್ಲಿ ತಾಯಿಯೊಂದಿಗೆ ಜಗಳ ಮಾಡಿಕೊಂಡಿದ್ದ ಬಾಲಕಿ, ನಂತರ ಮೈನ್ಪುರಿಯಿಂದ ನೋಯ್ಡಾಗೆ ಸಂಬಂಧಿಕರನ್ನು ಭೇಟಿಯಾಗಲು ಹೊರಟಿದ್ದಳು.
ನೋಯ್ಡಾ ಸೆಕ್ಟರ್ 63ಕ್ಕೆ ತೆರಳಲು ಬಸ್ ಹತ್ತಿದ್ದಳು. ಆದರೆ, ಭಾರಿ ಮಳೆ ಹಾಗೂ ಕಡಿಮೆ ಬೆಳಕಿನ ಕಾರಣ ತಪ್ಪಾಗಿ ಪಾರಿ ಚೌಕ್ನಲ್ಲಿ ಇಳಿದಿದ್ದಳು.
ಬಳಿಕ ರಸ್ತೆಯಲ್ಲಿ ಸಾಗುತ್ತಿದ್ದ ಬಸ್ವೊಂದನ್ನು ನಿಲ್ಲಿಸಿ ಬಾಲಕಿ ಸಹಾಯ ಕೇಳಿದ್ದಾಳೆ. ಆ ಸಂದರ್ಭದಲ್ಲಿ ಬಸ್ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಬಸ್ ನೋಯ್ಡಾ ಸೆಕ್ಟರ್ 63 ಕಡೆಗೆ ತೆರಳುತ್ತಿದೆ ಎಂದು ನಿರ್ವಾಹಕ ತಿಳಿಸಿದ ಬಳಿಕ ಬಾಲಕಿ ಬಸ್ ಹತ್ತಿದ್ದಾಳೆ.
ಬಸ್ ಚಲಿಸಲು ಆರಂಭಿಸಿದ ಕೆಲವೇ ಸಮಯದಲ್ಲಿ ನಿರ್ವಾಹಕ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದಾನೆ.
ಬಳಿಕ ಚಾಲಕ ಮತ್ತು ನಿರ್ವಾಹಕ ಸೇರಿ ಬಸ್ನೊಳಗೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಪ್ರತಿರೋಧಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಕೂಡಾ ಹಾಕಿದ್ದಾರೆ.
ಬಳಿಕ ಅದೇ ರಾತ್ರಿ ಬಾಲಕಿಯನ್ನು ಕಾಶ್ಮೀರಿ ಗೇಟ್ ಬಸ್ ನಿಲ್ದಾಣದ ಸಮೀಪ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.
ಘಟನೆ ಬಳಿಕ ಬಾಲಕಿ ಕಾಶ್ಮೀರಿ ಗೇಟ್ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಮಹಿಳಾ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಆಕೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.
ಬಾಲಕಿಯ ಹೇಳಿಕೆ ಆಧರಿಸಿ ಸಾಮೂಹಿಕ ಅತ್ಯಾಚಾರ, ಅಪಹರಣ ಹಾಗೂ ಹಲ್ಲೆಗೆ ಸಂಬಂಧಿಸಿದ ವಿವಿಧ ಕಾನೂನುಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಬಸ್ ಹಾಗೂ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಬಸ್ ಅನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಗಳು ಸೇರಿದಂತೆ ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ತನಿಖೆ ಮುಂದುವರಿದಿದೆ.
ಪೊಲೀಸ್ ಮೂಲಗಳ ಪ್ರಕಾರ, ಬಸ್ ಸೂರಜ್ಪುರದ ಕಾರ್ಯಾಗಾರದಲ್ಲಿ ದುರಸ್ತಿಗೆ ಒಳಗಾಗಿ ಖಾಲಿಯಾಗಿ ಹಿಂದಿರುಗುತ್ತಿತ್ತು. ಬಸ್ನಲ್ಲಿ ಯಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದನ್ನು ಕಾರ್ಯಾಗಾರಕ್ಕೆ ಕೊಂಡೊಯ್ಯಲಾಗಿತ್ತು. ದುರಸ್ತಿ ಪೂರ್ಣಗೊಂಡ ಬಳಿಕ ಚಾಲಕ ಮತ್ತು ನಿರ್ವಾಹಕರು ತಿಮಾರ್ಪುರದ ಪಾರ್ಕಿಂಗ್ ಸ್ಥಳದತ್ತ ತೆರಳುತ್ತಿದ್ದಾಗ ಪಾರಿ ಚೌಕ್ನಲ್ಲಿ ಬಾಲಕಿ ಎದುರಾಗಿದ್ದಳು ಎನ್ನಲಾಗಿದೆ.
ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಈ ಮಾರ್ಗವು ಹೆಚ್ಚಾಗಿ ರಿಂಗ್ ರಸ್ತೆ ಹಾಗೂ ಹೆದ್ದಾರಿಗಳ ಮೂಲಕ ಸಾಗುವುದರಿಂದ ಪದೇಪದೆ ಬ್ಯಾರಿಕೇಡ್ ಹಾಕುವುದು ಕಷ್ಟ. ಇದರಿಂದ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಆದಾಗ್ಯೂ ದೆಹಲಿ-ನೋಯ್ಡಾ ಗಡಿ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆ ನಡೆದ ಅದೇ ರಾತ್ರಿ ಬಾಲಕಿಯ ಕುಟುಂಬಕ್ಕೆ ಮಾಹಿತಿ ನೀಡಿ ಅವರನ್ನು ದೆಹಲಿಗೆ ಕರೆಸಿದೆವು,ಕುಟುಂಬದವರು ಆಗಮಿಸುವವರೆಗೆ ಮಹಿಳಾ ಪೊಲೀಸ್ ಸಿಬ್ಬಂದಿ ಬಾಲಕಿ ಅಗತ್ಯ ನೆರವು ನೀಡಿದರು. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಬಾಲಕಿಯನ್ನು ಕುಟುಂಬದವರಿಗೆ ಒಪ್ಪಿಸಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಾಲಕಿ ಮಾಡಿರುವ ಆರೋಪಗಳ ಹಿನ್ನೆಲೆಯಲ್ಲಿ ಆರೋಪಿಗೆ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದೆ.
ಬಸ್ನಲ್ಲಿಯೂ ವಿಧಿವಿಜ್ಞಾನ ಪರೀಕ್ಷೆ ಪೂರ್ಣಗೊಂಡಿದ್ದು, ಅಲ್ಲಿಂದ ಸಂಗ್ರಹಿಸಲಾದ ಸಾಕ್ಷ್ಯಗಳನ್ನು ಹೆಚ್ಚಿನ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
