ಮೈಸೂರು,ಸೆ.2: ಮೈಸೂರಿನ ಹೂಟಗಳ್ಳಿ ಬಡಾವಣೆಯ ನಮ್ಮ ಕ್ಲಿನಿಕ್ ಗೆ ಕೂಡಲೇ ವೈದ್ಯರನ್ನು ನೇಮಿಸುವಂತೆ ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ರಾಜಶೇಖರ್ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಬಡಜನರ ಆರೋಗ್ಯ ಕಾಪಾಡಲು ಸ್ಥಾಪಿಸಿರುವ ನಮ್ಮ ಕ್ಲಿನಿಕ್ನಲ್ಲಿ ವೈದ್ಯರೇ ಇಲ್ಲ, ಬಹಳಷ್ಟು ಕಡೆ ಸಿಬ್ಬಂದಿಗಳ ಕೊರತೆಯೂ ಇದೆ ಎಂದು ಅವರು ಗಮನ ಸೆಳೆದಿದ್ದಾರೆ.
ಬುಧವಾರ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮೋಹನ್ ಅವರನ್ನು ಭೇಟಿ ಮಾಡಿ
ಹೂಟಗಳ್ಳಿ ಬಡಾವಣೆಯ ನಮ್ಮ ಕ್ಲಿನಿಕ್ ಗೆ ತಕ್ಷಣ ವೈದ್ಯರನ್ನು ನೇಮಿಸುವಂತೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರಾಜಶೇಖರ್ ಅವರು ಮಾತನಾಡಿ, ಹೂಟಗಳ್ಳಿ ಗ್ರಾಮದಲ್ಲಿರುವ ನಮ್ಮ ಕ್ಲಿನಿಕ್ನಲ್ಲಿ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿಗಳ ಕೊರತೆಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಅರ್ಹ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಿಸಿ ಸಮರ್ಪಕ ಆರೋಗ್ಯ ಸೇವೆ ಒದಗಿಸಬೇಕು ಎಂದು ಆಗ್ರಹಿಸಿದರು.
ಹೂಟಗಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಕಾರ್ಮಿಕರು, ಬಡ ಹಾಗೂ ಮಧ್ಯಮ ವರ್ಗದ ಜನರು ವಾಸಮಾಡುತ್ತಿದ್ದು, ಇವರಿಗೆ ಸರ್ಕಾರಿ ಆರೋಗ್ಯ ಸೇವೆ ಸುಲಭವಾಗಿ ಲಭ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.
ಖಾಸಗಿ ಕ್ಲಿನಿಕ್ಗಳಲ್ಲಿ ಜನರನ್ನು ಸುಲಿಗೆ ಮಾಡಲಾಗುತ್ತಿದೆ. ಹೂಟಗಳ್ಳಿ ನಮ್ಮ ಕ್ಲಿನಿಕ್ನಲ್ಲಿ ವೈದ್ಯರು ಮತ್ತು ಸಿಬ್ಬಂದಿ ಸಮರ್ಪಕವಾಗಿ ಲಭ್ಯವಿಲ್ಲದ ಕಾರಣ ಪ್ರತಿದಿನ ಅನೇಕ ರೋಗಿಗಳು ಚಿಕಿತ್ಸೆಗಾಗಿ ಬಂದು ನಿರಾಶರಾಗಿ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದಿನಗೂಲಿ ಕಾರ್ಮಿಕರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್ಗಳತ್ತ ಮುಖ ಮಾಡಬೇಕಾಗಿದೆ. ಸಾಮಾನ್ಯ ಚಿಕಿತ್ಸೆಗಾಗಿ ತೆರಳಿದರೂ ಅಲ್ಲಿ ವೈದ್ಯರ ಶುಲ್ಕ, ಪರೀಕ್ಷೆ ಮತ್ತು ಔಷಧ ವೆಚ್ಚ ಸೇರಿದಂತೆ ಸಾವಿರಾರು ರೂಪಾಯಿ ಖರ್ಚಾಗುತ್ತಿದೆ. ದಿನದ ದುಡಿಮೆಯ ಮೇಲೆ ಜೀವನ ನಡೆಸುವ ಕುಟುಂಬಗಳಿಗೆ ಇದು ದೊಡ್ಡ ಆರ್ಥಿಕ ಹೊರೆಯಾಗಿದೆ ಎಂದು ರಾಜಶೇಖರ್ ಹೇಳಿದರು.
ಸರ್ಕಾರಿ ನಮ್ಮ ಕ್ಲಿನಿಕ್ನಲ್ಲಿ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಿಸದೆ ಇರುವುದು ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ಗಳಿಗೆ ಪರೋಕ್ಷವಾಗಿ ಅನುಕೂಲ ಮಾಡಿಕೊಡುತ್ತಿರಬಹುದು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹೂಟಗಳ್ಳಿ ಗ್ರಾಮದ ನಮ್ಮ ಕ್ಲಿನಿಕ್ಗೆ ಕೂಡಲೇ ವೈದ್ಯರು, ಅಗತ್ಯ ಆರೋಗ್ಯ ಸಿಬ್ಬಂದಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಸಾರ್ವಜನಿಕರಿಗೆ ಪ್ರತಿದಿನ ಸಮರ್ಪಕ ಆರೋಗ್ಯ ಸೇವೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ರಾಜಶೇಖರ್ ಒತ್ತಾಯಿಸಿದರು.
ಆರೋಗ್ಯ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ನಮ್ಮ ಕ್ಲೀನಿಕ್ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
