ಮೈಸೂರು: ಹಲವು ವರ್ಷಗಳ ಕಾಲ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಬಾರಿ ಹೊತ್ತು ನಾಡಿನ ಜನರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿರುವ ಕ್ಯಾಪ್ಟನ್ ಅಭಿಮನ್ಯು ಆನೆಗೆ ಮೈಸೂರಿನಲ್ಲೇ ಭಾವಪೂರ್ಣ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ಆಗ್ರಹಿಸಿದ್ದಾರೆ.
ದಸರಾ ಗಜಪಡೆಯ ಪ್ರಮುಖ ಆಕರ್ಷಣೆಯಾಗಿದ್ದ ಅಭಿಮನ್ಯು, ತನ್ನ ಗಾಂಭೀರ್ಯ, ಶಾಂತ ಸ್ವಭಾವ ಮತ್ತು ಕರ್ತವ್ಯನಿಷ್ಠೆಯಿಂದ ಕೋಟ್ಯಂತರ ಜನರ ಮನಗೆದ್ದಿದ್ದಾನೆ. ಇಂತಹ ಹೆಮ್ಮೆಯ ಆನೆಗೆ ಗೌರವಯುತವಾಗಿ ಬೀಳ್ಕೊಡುವುದು ಮೈಸೂರು ಜನತೆಯ ಕೃತಜ್ಞತೆಯ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ.
ದಸರಾ ಗಜಪಡೆಯ ಮತ್ತೊಂದು ಜನಪ್ರಿಯ ಆನೆಯಾದ ಭೀಮನನ್ನು ಮುಂದಿನ ದಸರಾ ಮಹೋತ್ಸವಗಳಲ್ಲಿಯೂ ಗಜಪಡೆಯಲ್ಲಿ ಉಳಿಸಿಕೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ಭೀಮನ ಗಾಂಭೀರ್ಯ, ಶಿಸ್ತು ಮತ್ತು ಜನಾಕರ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ಹಾಗೂ ದಸರಾ ಅಧಿಕಾರಿಗಳು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ವಿಕ್ರಮ್ ಅಯ್ಯಂಗಾರ್ ಒತ್ತಾಯಿಸಿದ್ದಾರೆ.
ಮೈಸೂರು ದಸರಾ ಕೇವಲ ಉತ್ಸವವಲ್ಲ, ಅದು ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ. ಆ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಗಜಪಡೆಯ ಆನೆಗಳಿಗೆ ಸೂಕ್ತ ಗೌರವ ಸಿಗಬೇಕು ಎಂದು ವಿಕ್ರಂ ಅಯ್ಯಂಗಾರ್ ಆಗ್ರಹಿಸಿದ್ದಾರೆ.
