ಮೈಸೂರು,ಸೆ.2: ಮೈಸೂರಿನ ಹೂಟಗಳ್ಳಿಯಲ್ಲಿ ಶ್ರೀ ಭುವನೇಶ್ವರಿ ಟೈಲರಿಂಗ್ ಮಾಲೀಕರ ಸಂಘವನ್ನು ಉದ್ಘಾಟಿಸಲಾಯಿತು.
ಟೈಲರಿಂಗ್ ವೃತ್ತಿಯಲ್ಲಿ ತೊಡಗಿರುವ ಸ್ಥಳೀಯ ಮಾಲೀಕರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ, ಅವರ ಹಿತಾಸಕ್ತಿ, ವೃತ್ತಿಯ ಅಭಿವೃದ್ಧಿ ಹಾಗೂ ಪರಸ್ಪರ ಸಹಕಾರಕ್ಕಾಗಿ ಸಂಘವನ್ನು ಸ್ಥಾಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ. ದೇವೇಗೌಡ ಅವರು, ಟೈಲರಿಂಗ್ ವೃತ್ತಿಯಲ್ಲಿ ತೊಡಗಿರುವವರಿಗೆ ಅಗತ್ಯವಿರುವ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ವಿಶೇಷವಾಗಿ ಅರ್ಹರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ಒದಗಿಸುವುದು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಹಕಾರ ನೀಡುವುದಾಗಿ ಆಶ್ವಾಸನೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಚಂದ್ರಿಕಾ ಸುರೇಶ್ ಅವರು, ಸಂಘದ ಸದಸ್ಯರಿಗೆ ಯಾವುದೇ ಸಂದರ್ಭದಲ್ಲಿ ಅಗತ್ಯವಿರುವ ಬೆಂಬಲ ಮತ್ತು ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಪಿ.ಜಿ.ಆರ್.ಎಸ್.ಎಸ್. ಪಂಚಾಯತ್ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿಯ ಅಧ್ಯಕ್ಷರಾದ ಯಾದವ್ ಹರೀಶ್ ಅವರು, ಸಂಘದ ಕಾರ್ಯಚಟುವಟಿಕೆಗಳು ಹಾಗೂ ಸದಸ್ಯರ ಹಿತಾಸಕ್ತಿಗಾಗಿ ಅಗತ್ಯವಿರುವ ಸಂದರ್ಭದಲ್ಲಿ ಸದಾ ಸಹಕಾರ ಮತ್ತು ಬೆಂಬಲ ನೀಡುವುದಾಗಿ ತಿಳಿಸಿದರು.
ಚಿರಂಜೀವ ಸೇವಾ ಟ್ರಸ್ಟ್, ಮೈಸೂರು ಅಧ್ಯಕ್ಷರಾದ ರಕ್ತದಾನಿ ಮಂಜು ಅವರು ಸಂಘದ ಮುಂದಿನ ಪಯಣದಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ಬೆಂಬಲ ಮತ್ತು ಮಾರ್ಗದರ್ಶನವನ್ನು ನೀಡುವುದಾಗಿ ತಿಳಿಸಿದರು.
ಸಂಘದ ಅಧ್ಯಕ್ಷರಾದ ಮಣಿ ಅವರು, ಮುಂದಿನ ದಿನಗಳಲ್ಲಿ ಸುತ್ತಮುತ್ತಲಿನ ಎಲ್ಲಾ ಟೈಲರಿಂಗ್ ವೃತ್ತಿಯಲ್ಲಿ ತೊಡಗಿರುವವರನ್ನು ಸಂಘದೊಂದಿಗೆ ಸಂಪರ್ಕಿಸುವ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು. ಟೈಲರಿಂಗ್ ಕ್ಷೇತ್ರದಲ್ಲಿ ಇರುವವರಿಗೆ ಅಗತ್ಯವಿರುವ ಮಾರ್ಗದರ್ಶನ, ಸಹಕಾರ ಹಾಗೂ ಸಾಧ್ಯವಾದ ಮಟ್ಟಿಗೆ ನೆರವನ್ನು ಒದಗಿಸುವ ಉದ್ದೇಶ ಸಂಘದ್ದಾಗಿದೆ ಎಂದು ಹೇಳಿದರು.
ಸಂಘದ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ, ಟೈಲರಿಂಗ್ ವೃತ್ತಿಯಲ್ಲಿ ತೊಡಗಿರುವವರ ಸಮಸ್ಯೆಗಳಿಗೆ ಸ್ಪಂದಿಸುವುದು, ಅಗತ್ಯವಿರುವವರಿಗೆ ನೆರವು ನೀಡುವುದು ಹಾಗೂ ವೃತ್ತಿಯ ಅಭಿವೃದ್ಧಿಗೆ ಸಹಕಾರಿಯಾಗುವ ವಿವಿಧ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮಕ್ಕೆ ಸಂಘದ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ಕೆ ಎಚ್ ಬಿ / ಎನ್ ಎಚ್ ಬಿ ಬಡಾವಣೆ, ಜಿಟಿ ಲೇಔಟ್ ಬಡಾವಣೆ ಬೆಳವಾಡಿ ಗ್ರಾಮದವರು ಕೂರ್ಗಳ್ಳಿ ಹೂಟಗಳ್ಳಿ ಗ್ರಾಮದವರು ಸೇರಿದರು
ಟೈಲರಿಂಗ್ ಕಲಿಯಲು ಆಸಕ್ತಿ ಇರುವವರು, ಹೊಲಿಗೆ ಯಂತ್ರಗಳ ಅಗತ್ಯವಿರುವವರು ಅಥವಾ ಟೈಲರಿಂಗ್ ವೃತ್ತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಹಾಗೂ ಮಾರ್ಗದರ್ಶನದ ಅಗತ್ಯವಿರುವವರು ಸಂಘವನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ
