ಚಾಮರಾಜನಗರ, ಸೆ.2 : ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಹನೂರು ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಚಾಮರಾಜನಗರ ಜಿಲ್ಲೆಯ ಐದು ತಾಲ್ಲೂಕುಗಳು ತೀವ್ರ ಬರಪೀಡಿತ ಎಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಲಭ್ಯತೆ, ಜಾನುವಾರುಗಳಿಗೆ ಮೇವು ಲಭ್ಯತೆ, ಜನರಿಗೆ ಉದ್ಯೋಗ ನೀಡುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜನರಿಗೆ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಅಗತ್ಯ ಡಿಸಿಎಂ ಸೂಚನೆಗಳನ್ನು ಡಿಸಿಎಂ ನೀಡಿದರು.
ಸರ್ಕಾರ ಬರ ನಿರ್ವಹಣೆಯ ಕುರಿತು ಬಹಳ ಗಂಭೀರವಾಗಿದೆ. ಅಧಿಕಾರಿಗಳು ಬರವನ್ನು ಹಗುರವಾಗಿ ಪರಿಗಣಿಸಬಾರದು,
ಜನರಿಗೆ ಕುಡಿಯುವ ನೀರು, ಜೀವನೋಪಾಯಕ್ಕೆ ಅಗತ್ಯವಿರುವ ಉದ್ಯೋಗ, ಆರೋಗ್ಯ, ಜಾನುವಾರುಗಳಿಗೆ ಮೇವು, ನೀರು ಒದಗಿಸುವುದು ನಮ್ಮ ಮುಂದಿರುವ ಸವಾಲುಗಳು. ಇದನ್ನು ಕಂದಾಯ ಇಲಾಖೆಯು ಇತರೆ ಸಂಬಂಧಿತ ಇಲಾಖೆಗಳ ಜೊತೆ ಸೇರಿ ಯಾವುದೇ ಸಮಸ್ಯೆಯಾಗದಂತೆ ಪರಿಸ್ಥಿತಿಯನ್ನು ನಿಭಾಯಿಸಬೇಕೆಂದು ಸಲಹೆ ನೀಡಿದರು.
ಚಾಮರಾಜನಗರದಲ್ಲಿ ಜುಲೈ 2026 ರಿಂದ ಈಚೆಗೆ ಕೇವಲ 0.81 ಲಕ್ಷ ಮಾನವ ದಿನಗಳಷ್ಟು ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಆದರೆ ಕಳೆದ ವರ್ಷ ಇದೇ 2 ತಿಂಗಳುಗಳಲ್ಲಿ 2.50 ಲಕ್ಷ ಉದ್ಯೋಗಗಳನ್ನು ಸೃಜಿಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.67 ರಷ್ಟು ಕಡಿಮೆಯಾಗಿದೆ. ಈ ವರ್ಷ ಯಾಕೆ ಇಷ್ಟು ಕಡಿಮೆಯಾಗಿದೆ. ಜನರು ಉದ್ಯೋಗ ಕೇಳುತ್ತಿಲ್ಲವೇ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಅವರ ಅಧೀನ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಡಿಸಿಎಂ ಪ್ರಶ್ನಿಸಿದರು.
ಚಾಮರಾಜನಗರದಲ್ಲಿ ಕೃಷಿ ಬೆಳೆ ವಿಮೆಯೂ ಕಡಿಮೆಯಾಗಿದೆ. ರಾಜ್ಯದಲ್ಲಿ 49.64 ಲಕ್ಷ ರೈತರ ಅರ್ಜಿಗಳಿಗೆ ಹಾಗೂ 33,17,167 ಹೆಕ್ಟೇರ್ ಭೂಮಿಗೆ ಬೆಳೆ ವಿಮೆ ಮಾಡಿಸಲಾಗಿದೆ. ಆದರೆ ಚಾಮರಾಜನಗರದಲ್ಲಿ ಕೇವಲ 18,436 ಜನ 9,984 ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ನೋಂದಾಯಿಸಿಕೊಂಡಿರುತ್ತಾರೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನವಹಿಸಬೇಕು. ರೈತರಿಗೆ ಉತ್ತೇಜನ ನೀಡುವ ಕೆಲಸಗಳನ್ನು ಯಾಕೆ ಮಾಡಲಿಲ್ಲ. ಈ ರೀತಿ ಆಗಬಾರದು ಎಂದು ಎಚ್ಚರಿಕೆ ನೀಡಿದರು.
ಗ್ರಾಮ ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಇಲ್ಲಿ 48 ಗ್ರಾಮಗಳಿಗೆ 48 ಟ್ಯಾಂಕರ್ಗಳ ಮೂಲಕ ನೀರು ಪೂರೈಸಲಾಗುತ್ತಿದ್ದು, 11 ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆಯಲಾಗಿದೆ ಹಾಗೂ 11 ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 2,22,566 ಟನ್ ಮೇವು ಲಭ್ಯವಿದ್ದು, ಇದು ಸರಿಸುಮಾರು 23 ವಾರಗಳಿಗೆ ಸಾಕಾಗುತ್ತದೆ. ಆದರೆ, ಗುಂಡ್ಲುಪೇಟೆ ತಾಲೂಕಿನಲ್ಲಿ ಕೇವಲ 17 ವಾರಗಳಿಗೆ ಮಾತ್ರ ಮೇವು ಲಭ್ಯವಿದ್ದು, ಮುಂದಿನ ಮುಂಗಾರಿನವರೆಗೆ ಮೇವಿನ ಕೊರತೆಯಾಗದಂತೆ ತುರ್ತು ಯೋಜನೆಯನ್ನು ಸಿದ್ಧಪಡಿಸಬೇಕಿದೆ ಎಂದು ಸೂಚಿಸಿದರು.
ಗುಂಡ್ಲುಪೇಟೆಯಲ್ಲಿ ಕೇವಲ 17 ವಾರಗಳಿಗೆ ಮಾತ್ರ ಮೇವು ಲಭ್ಯವಿರುವುದರಿಂದ, ಅಲ್ಲಿ ತಕ್ಷಣವೇ ಮೇವು ಬ್ಯಾಂಕ್ ಸ್ಥಾಪನೆಗೆ ಮತ್ತು ಮುಂದಿನ ಮುಂಗಾರಿನವರೆಗೆ ಮೇವು ಒದಗಿಸಲು ತುರ್ತು ಯೋಜನೆ ಮಾಡಿಕೊಳ್ಳಬೇಕಾಗಿದೆ. ಮೇವಿನ ಕಿಟ್ಗಳನ್ನು ವಿತರಿಸಲು ಪಶುಸಂಗೋಪನಾ ಇಲಾಖೆಗೆ ಸರ್ಕಾರ ಈಗಾಗಲೇ 25 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ ಎಂದು ಪರಮೇಶ್ವರ್ ತಿಳಿಸಿದರು.
ಸಭೆಯಲ್ಲಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಪುಟ್ಟರಂಗ ಶೆಟ್ಟಿ ಶಾಸಕರಾದ ಎಂ.ಆರ್. ಮಂಜುನಾಥ್, ಎ.ಆರ್.ಕ ಕೃಷ್ಣಮೂರ್ತಿ, ಎಚ್.ಎಂ. ಗಣೇಶ್ ಪ್ರಸಾದ್ , ದರ್ಶನ್ ದೃವನಾರಾಯಣ್,ಕಾಡಾ ಅಧ್ಯಕ್ಷರಾದ ಪಿ.ಮರಿಸ್ವಾಮಿ ಜಿಲ್ಲಾಧಿಕಾರಿ ಶ್ರೀರೂಪ,ಜಿ.ಪಂ.ಸಿಇ.ಒ.ಮೋನಾರೋತ್,ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಎಂ.ಮುತ್ತುರಾಜು ಮತ್ತಿತರ ಅಧಿಕಾರಿಗಳು ಹಾಜರಿದ್ದರು.
